ಕಿರುಕುಳಕ್ಕೊಳಗಾದ ನಿರ್ಗತಿಕನಿಗೆ ಆಪತ್ಬಾಂಧವನಾಗಿ ರಿಯಲ್ ಹೀರೋ ಆದ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್

Photo: (twitter/@MoSalah)
ಲಂಡನ್ : ಲಿವರ್ ಪೂಲ್ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್ ಇತ್ತೀಚೆಗೆ ನಿರ್ಗತಿಕ ವ್ಯಕ್ತಿಯೊಬ್ಬನ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಡೆಯಲು ಮಧ್ಯ ಪ್ರವೇಶಿಸಿ ತಮ್ಮ ಮಾನವೀಯ ಅಂತಃಕರಣದಿಂದ ಎಲ್ಲರ ಮನಗೆದ್ದಿದ್ದಾರೆ. ಲಿವರ್ ಪೂಲ್ ಸಮೀಪದ ಅನ್ಫೀಲ್ಡ್ ಎಂಬಲ್ಲಿ ಕಳೆದ ತಿಂಗಳು ನಡೆದ ಈ ವಿದ್ಯಮಾನದ ಸಿಸಿಟಿವಿ ದೃಶ್ಯಾವಳಿ ಇದೀಗ ಹರಿದಾಡುತ್ತಿದೆ.
ಸಲಾಹ್ ಅವರು ನಗರದ ಪೆಟ್ರೋಲ್ ಬಂಕ್ ಒಂದಕ್ಕೆ ಹೋಗಿದ್ದ ವೇಳೆ ಅಲ್ಲಿ ಸಮೀಪದಲ್ಲಿ ಡೇವಿಡ್ ಕ್ರೈಗ್ ಎಂಬ ನಿರ್ಗತಿಕ ವ್ಯಕ್ತಿಗೆ ಜನರ ಒಂದು ಗುಂಪು ಕಿರುಕುಳ ನೀಡುವುದನ್ನು ಗಮನಿಸಿದ್ದರು. ತಕ್ಷಣ ಮಧ್ಯ ಪ್ರವೇಶಿಸಿದ ಈ 28 ವರ್ಷದ ಈಜಿಪ್ಟ್ ಮೂಲದ ಆಟಗಾರ ಆ ವ್ಯಕ್ತಿಗೆ ಕಿರುಕುಳ ನೀಡಿದವರಿಗೆ ಎಚ್ಚರಿಕೆ ನೀಡಿದ್ದೇ ಅಲ್ಲದೆ ಅವರ ಪರಿಸ್ಥಿತಿಯೂ ಈ ನಿರ್ಗತಿಕ ವ್ಯಕ್ತಿಯಂತೆಯೇ ಮುಂದೊಂದು ದಿನ ಆಗಬಹುದು ಎಂದು ಅವರಿಗೆ ನೆನಪಿಸಿ ಆ ವ್ಯಕ್ತಿಗೆ ಹಣವನ್ನೂ ನೀಡಿದ್ದಾರೆ.
"ಫುಟ್ಬಾಲ್ ಅಂಗಣದಲ್ಲಿ ಅವರು ಮಿಂಚುವ ಹಾಗೆಯೇ ನಿಜ ಜೀವನದಲ್ಲೂ ಅವರೊಬ್ಬ ಅದ್ಭುತ ವ್ಯಕ್ತಿ,'' ಎಂದು ಸಲಾಹ್ ಅವರಿಂದ ಸಹಾಯ ಪಡೆದ ವ್ಯಕ್ತಿ ಹೇಳಿದ್ದಾನಲ್ಲದೆ, "ಆತ ನನಗೆ 100 ಪೌಂಡ್ ಕೂಡ ನೀಡಿದರು ಅವರು ನಿಜವಾಗಿಯೂ ಮಹಾನ್ ವ್ಯಕ್ತಿ ಅವರು ನನ್ನ ಪಾಲಿಗೆ ನಿಜ ಜೀವನದ ಹೀರೋ,'' ಎಂದು ಆತ ಹೇಳಿದ್ದಾನೆ.
ಈ ಹಿಂದೆ ಸಲಾಹ್ ತಮ್ಮ ತವರು ದೇಶದಲ್ಲಿ ವೈದ್ಯಕೀಯ ಕೇಂದ್ರ ಹಾಗೂ ಬಾಲಕಿಯರ ಶಾಲೆ ನಿರ್ಮಿಸಲು ಕೂಡ ಸಹಾಯ ಮಾಡಿದ್ದಾರೆ.







