'ಮೀನುಗಾರಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅವಳಡಿಕೆಗೆ ಆದ್ಯತೆ ನೀಡಿ'
ಸರಕಾರಕ್ಕೆ ಕರ್ನಾಟಕ ಮೀನುಗಾರರ ಮನವಿ

ಉಡುಪಿ, ಅ.8: ಪ್ರಕೃತಿಯೊಂದಿಗೆ ಸದಾ ಹೋರಾಟ ನಡೆಸುವ ಮೀನುಗಾರಿಕೆಯಲ್ಲಿ ಮೀನುಗಾರರ ಹಾಗೂ ಮೀನುಗಾರಿಕಾ ಬೋಟುಗಳ ರಕ್ಷಣೆಗಾಗಿ ಅತ್ಯಾಧುನಿಕ ಸಂವಹನ ತಂತ್ರಜ್ಞಾನವನ್ನು ಅಳವಡಿಸಲು ಆದ್ಯತೆ ನೀಡುವಂತೆ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಷನ್‌ನ ಅಧ್ಯಕ್ಷ ಗಣಪತಿ ಮಾಂಗ್ರೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರರ ಪ್ರಾಣ ರಕ್ಷಣೆ ಹಾಗೂ ಉತ್ಪಾದನೆಯಲ್ಲಿ ಏರಿಕೆಗೆ ಆಧುನಿಕ ತಂತ್ರಜ್ಞಾನದ ಅಳವಡಿಕೆ ತುರ್ತು ಅಗತ್ಯವಾಗಿದೆ. ರಾಜ್ಯದ ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆಯ ತುರ್ತು ಅಗತ್ಯವನ್ನು ಪ್ರತಿಪಾದಿಸಿ, ಇದನ್ನು ಕೂಡಲೇ ಕಾರ್ಯಗತಗೊಳಿಸುವಂತೆ ಒತ್ತಾಯಿಸಿ ರಾಜ್ಯದ ಪ್ರಮುಖ ಮೀನುಗಾರಿಕಾ ಸಂಘಟನೆಗಳು, ಇಂಡಿಯನ್ ಫಿಶರ್‌ಮೆನ್ ಫಾರ್ ಟೆಕ್ನಾಲಜಿ ಅಡೋಪ್ಶನ್ (ಐಎಫ್‌ಟಿಎ)ನ ಬೆಂಬಲ ದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿವೆ ಎಂದವರು ಹೇಳಿದರು.
ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳಿಗೆ, ಮೊಬೈಲ್ ಸಾಧನ ಗಳೊಂದಿಗೆ ಸಂಪರ್ಕ ಸಾಧಿಸಬಲ್ಲ ಉಪಗ್ರಹ ಆಧಾರಿತ ಟ್ರಾಕರ್ ವ್ಯವಸ್ಥೆ ಯನ್ನು ಅಳವಡಿಸುವ ಕಾರ್ಯ ನಡೆಯಬೇಕು. ನಮ್ಮ ಮೀನುಗಾರರಿಗೆ ಇಂಥ ಆಧುನಿಕ ಸಂಪರ್ಕ ತಂತ್ರಜ್ಞಾನಗಳು ಅಲಭ್ಯ ವಾಗಿರುವುದರಿಂದ ಪ್ರತಿವರ್ಷ ನೂರಾರು ಮೀನುಗಾರರ ಜೀವಕ್ಕೆ ಅಪಾಯ ಎದುರಾಗುತ್ತಿದೆ. ಅಲ್ಲದೇ ಆಳ ಸಮುದ್ರ ಮೀನುಗಾರಿಕೆಯಲ್ಲಿ ಕೆಲವೊಮ್ಮೆ ಆದ್ಯತೆಯಲ್ಲಿ ಮೀನುಗಾರರ ಜೀವವನ್ನು ರಕ್ಷಿಸಿದರೂ, ಅವರ ಕೋಟ್ಯಾಂತರ ರೂ.ಬಂಡವಾಳ ಹೂಡಿಕೆಯ ಬೋಟ್‌ಗಳನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಮಾಂಗ್ರೆ ನುಡಿದರು.
ಕಾರವಾರದ ಪರ್ಸಿನ್ ಮೀನುಗಾರಿಕಾ ಯೂನಿಯನ್‌ನ ಸದಸ್ಯ ನಿತಿನ್ ರಮಾಕಾಂತ ಗಾಂವ್ಕರ್ ಅವರು ಈ ವಿಷಯದಲ್ಲಿ ವಿವರಗಳನ್ನು ನೀಡಿ, ಉಪಗ್ರಹ ಆಧಾರಿತ ನೇವಿಗೇಶನ್ ವ್ಯವಸ್ಥೆ ಅಳವಡಿಸುವುದರಿಂದ ಸಮಯಕ್ಕೆ ಸರಿಯಾಗಿ ಮೀನುಗಾರರಿಗೆ ಸುರಕ್ಷತಾ ಎಚ್ಚರಿಕೆ ಸಂದೇಶಗಳನ್ನು ರವಾನಿಸಲು ಸಾಧ್ಯವಾಗುತ್ತದೆ. ಮೀನುಗಳ ಲಭ್ಯತೆಯ ಮಾಹಿತಿಯೂ ಸಿಗುತ್ತದೆ. ಅಲ್ಲದೇ ಮೀನುಗಾರರ ಜೀವನ ಹಾಗೂ ಜೀವನೋಪಾಯಕ್ಕೆ ಬಂದೊದಗುವ ದೊಡ್ಡ ಅಪಾಯ ಹಾಗೂ ಸಂಕಷ್ಟದ ಪರಿಸ್ಥಿತಿಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಇಂಥ ತಂತ್ರ ಜ್ಞಾನದ ಅಳವಡಿಕೆಗೆ ಸರಕಾರದ ಸಹಾಯದ ಅಗತ್ಯವಿದೆ ಎಂದರು.
ಬೋಟಿನ ರಕ್ಷಣೆಯೂ ಆಗಬೇಕು: ಮೀನುಗಾರಿಕೆಗೆ ತೆರಳಿದಾಗ ಅವಘಡಗಳು ಸಂಭವಿಸಿದರೆ ಮೀನುಗಾರರ ಪ್ರಾಣರಕ್ಷಣೆಯ ಜೊತೆಜೊತೆಗೆ ಮುಳುಗುತ್ತಿರುವ ಬೋಟ್ ರಕ್ಷಿಸುವ ವ್ಯವಸ್ಥೆಯೂ ಆಗಬೇಕಾಗಿದೆ. ಇದಕ್ಕಾಗಿ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಬೇಕು ಎಂದು ಮಲ್ಪೆ ಆಳಸಮುದ್ರ ಟ್ರಾಲ್‌ಬೋಟ್ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಒತ್ತಾಯಿಸಿದರು.
ಇಂದು ಆಳಸಮುದ್ರ ಮೀನುಗಾರಿಕಾ ಬೋಟ್‌ಗಳ ಮೌಲ್ಯ ಒಂದು ಕೋಟಿ ರೂ.ಗಳಿಗೂ ಅಧಿಕವಿರುತ್ತದೆ. ಇಂಥ ಬೋಟು ನಡುಸಮುದ್ರದಲ್ಲಿ ಮುಳುಗಿದರೆ, ಮೀನುಗಾರರ ಬದುಕು ಕೂಡ ಅದರೊಂದಿಗೆ ಮುಳುಗುತ್ತದೆ. ಈ ನಿಟ್ಟಿನಲ್ಲಿ ಅವಘಡಗಳಾದಾಗ ಬೋಟ್ ಅನ್ನು ಸಮುದ್ರದಿಂದ ಮೇಲೆತ್ತುವ ಸೌಲಭ್ಯವನ್ನು ಒದಗಿಸಬೇಕು. ಇದಕ್ಕಾಗಿ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಟಗ್‌ನ ಅಗತ್ಯವಿದೆ ಎಂದವರು ಹೇಳಿದರು.
ಮೀನುಗಾರರು ಸಮುದ್ರದಲ್ಲಿ ಅನಾರೋಗ್ಯಕ್ಕೆ ತುತ್ತಾದರೆ ತುರ್ತು ವೈದ್ಯಕೀಯ ನೆರವಿಗೆ ಕೇರಳದ ಮಾದರಿಯಲ್ಲಿ ‘ಸಾಗರ ಆಂಬುಲೆನ್ಸ್’ ಸೌಲಭ್ಯ ಕರ್ನಾಟಕ ಕರಾವಳಿಯ ಮೀನುಗಾರರಿಗೂ ಲಭ್ಯವಾಗಬೇಕು. ಹೃದಯಾಘಾತ ದಂತಹ ತುರ್ತು ಸಂದರ್ಭದಲ್ಲಿ ನೆರವಿಗೆ ಇದರಲ್ಲಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಇರಬೇಕು. ಅಲ್ಲದೇ ಕರ್ನಾಟಕ ಕರಾವಳಿಯಲ್ಲಿ ಮೀನುಗಾರರ ರಕ್ಷಣೆಗೆ ನಿಯೋಜಿತವಾಗಿರುವ ಕರಾವಳಿ ಕಾವಲು ಪಡೆಯಲ್ಲಿ ಶೇ.60ರಷ್ಟು ಸ್ಥಳೀಯ ನುರಿತ ಮೀನುಗಾರ ಯುವಕರನ್ನು ನೇಮಿಸಬೇಕು ಎಂದೂ ರವಿರಾಜ ಸುವರ್ಣ ಮನವಿ ಮಾಡಿದರು.
ಮೀನುಗಾರರಿಗೆ ಪ್ರತ್ಯೇಕ ಯೋಜನೆ ಬೇಕು: ಕರಾವಳಿಯ ಎಲ್ಲಾ ಮೀನುಗಾರರಿಗೂ ರೈತರಿಗೆ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯದಂಥ ಪ್ರತ್ಯೇಕ ಯೋಜನೆ ಜಾರಿಯಾಗಬೇಕು. ಈಗ ಮೀನುಗಾರರಿಗೆ ಬ್ಯಾಂಕ್‌ಗಳಿಂದ ಸಿಗುವ ಸಾಲಸೌಲಭ್ಯ ಕೇವಲ ಬೋಟ್‌ಗಳ ಆರ್‌ಸಿ ಹೊಂದಿರುವ ಮಾಲಕರಿಗೆ ಮಾತ್ರ ಸಿಗುತ್ತಿದೆ. ಅದನ್ನು ಮೀನುಗಾರರ ಸಹಕಾರ ಸಂಘದ ನೊಂದಾಯಿತರಾದ ಎಲ್ಲಾ ಮೀನುಗಾರ ರಿಗೂ ಸಿಗುವಂತೆ ನೋಡಿಕೊಳ್ಳಬೇಕು. ಅಲ್ಲದೇ ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಮೃತಪಡುವ ಮೀನುಗಾರರಿಗೆ ಸಿಗುವಂತೆ ನದಿಗಳಲ್ಲೂ ಅಕಸ್ಮಿಕವಾಗಿ ಸಾಯುವ ಮೀನುಗಾರ ರಿಗೂ ಸಮಾನವಾಗಿ ಆರು ಲಕ್ಷ ರೂ. ಪರಿಹಾರ ಸಿಗಬೇಕು ಎಂದು ರವಿರಾಜ ಸುವರ್ಣ ಒತ್ತಾಯಿಸಿದರು.
ಲಾಕ್‌ಡೌನ್‌ನಿಂದ ಪ್ರತಿದಿನ 224 ಕೋಟಿ ರೂ. ನಷ್ಟ
ಕೋವಿಡ್-19 ಮೀನುಗಾರಿಕಾ ಕ್ಷೇತ್ರದ ಮೇಲೂ ಅಪಾರ ಪರಿಣಾಮ ಬೀರಿದೆ. 2.8 ಕೋಟಿಗೂ ಅಧಿಕ ಮೀನುಗಾರರನ್ನು ಹೊಂದಿರುವ ಭಾರತದ ಮೀನುಗಾರಿಕಾ ಕ್ಷೇತ್ರ ಕೋವಿಡ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಗಣಪತಿ ಮಾಂಗ್ರೆ ನುಡಿದರು.
ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆ (ಸಿಐಎಫ್‌ಟಿ) ವರದಿಯ ಪ್ರಕಾರ ಲಾಕ್‌ಡೌನ್ ಸಮಯದಲ್ಲಿ ಪ್ರತಿದಿನ 224 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಮೀನುಗಾರರು ಸುರಕ್ಷಿತವಾಗಿ ಆಳಸಮುದ್ರ ಮೀನುಗಾರಿಕೆ ನಡೆಸಬೇಕಾಗಿದೆ. ಬೋಟ್ ಮತ್ತು ಮೀನುಗಾರರ ಪ್ರಾಣರಕ್ಷಣೆಗಾಗಿ ಬೋಟ್‌ಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸಂಪರ್ಕ ವ್ಯವಸ್ಥೆ ಅಳವಡಿಸಬೇಕು ಎಂಬುದು ಮೀನುಗಾರ ಸಂಘಟನೆಗಳ ಆಗ್ರಹ ಎಂದು ಅವರು ನುಡಿದರು.







