ಹತ್ರಸ್ ಘಟನೆ ಖಂಡಿಸಿ ಬಿ.ಸಿ.ರೋಡಿನಲ್ಲಿ ಪಿಎಫ್ ಐ ಪ್ರತಿಭಟನೆ

ಬಂಟ್ವಾಳ, ಅ.8: ಹತ್ರಸ್ ನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಉತ್ತರ ಪ್ರದೇಶದ ಬಿಜೆಪಿ ಸರಕಾರ ತನಗೆ ಜಾಗತಿಕ ಮಟ್ಟದಲ್ಲಿ ಆಗಿರುವ ಮುಜುಗರವನ್ನು ತಪ್ಪಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಹೊರಿಸಿ ಮಾನಹಾನಿ ಅಭಿಯಾನ ನಡೆಸುತ್ತಿರುವುದನ್ನು ಖಂಡಿಸುವುದಾಗಿ ಮತ್ತು ಅದರ ವಿರುದ್ಧ ಪಿಎಫ್ ಐ ಬಂಟ್ವಾಳ ತಾಲೂಕು ಸಮಿತಿಯ ವತಿಯಿಂದ ಗುರುವಾರ ಬಿ.ಸಿ.ರೋಡಿನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.
ಆದಿತ್ಯನಾಥ್ ಸರಕಾರ ಜಂಗಲ್ ರಾಜ್ ಆಗಿ ಮಾರ್ಪಟ್ಟಿದ್ದು ಅಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರಸಕ್ತ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರೊಂದಿಗೆ ದಲಿತರು ಮತ್ತು ಮಹಿಳೆಯರು ಕೂಡಾ ಅಸುರಕ್ಷಿತರಾಗಿದ್ದಾರೆ. ಹತ್ರಸ್ ಅತ್ಯಾಚಾರ ಪ್ರಕರಣ ಸಹಿತ ಹಲವು ಘಟನೆಗಳಿಂದ ಜಾಗತಿಕ ಮಟ್ಟದಲ್ಲಿ ತೀವ್ರ ಮುಜುಗರಕ್ಕೆ ಒಳಗಾದ ಉತ್ತರ ಪ್ರದೇಶ ಸರಕಾರ ಹತ್ರಸ್ ಪ್ರಕರಣದ ಬಳಿಕ ಪಿಎಫ್ ಐ ಜನಾಂಗೀಯ ಮತ್ತು ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಪಿತೂರಿ ನಡೆಸಿದೆ ಎಂದು ಆರೋಪ ಹೊರಿಸಿರುವುದು ನಿರಾಧಾರ ಮತ್ತು ಹಾಸ್ಯಾಸ್ಪದವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪಿಎಫ್ ಐ ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿಕೊಂಡು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ನಂಬಿಕೆ ಇಟ್ಟಿರುವ ಸಂಘಟನೆಯಾಗಿದೆ. ಸುಳ್ಳು ಆರೋಪಗಳ ಮೂಲಕ ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸರು ಪಿಎಫ್ ಐ ನಾಯಕರು ಮತ್ತು ಕಾರ್ಯ ಕರ್ತರನ್ನು ಬೇಟೆಯಾಡುವುದನ್ನು ತಕ್ಷಣ ನಿಲ್ಲಿಸಬೇಕು. ನಿರಾಧಾರವಾಗಿ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಹತ್ರಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಸಲು ನಿವೃತ್ತ ನ್ಯಾಯಾಧೀಶರ ಮೂಲಕ ಇಡೀ ಘಟನೆಯ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನಾ ಸಭೆಯ ಬಳಿಕ ಬಂಟ್ವಾಳ ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪಿಎಫ್ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಪಾಣೆಮಂಗಳೂರು, ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಕುಂಪನಮಜಲು, ಎಸ್.ಡಿ.ಪಿ.ಐ. ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.







