ಉಡುಪಿ: 237 ಮಂದಿಗೆ ಕೊರೋನ ಸೋಂಕು, ಕೋವಿಡ್ ಗೆ ಓರ್ವ ಬಲಿ

ಉಡುಪಿ, ಅ.8: ಉಡುಪಿ ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 237 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಕೊರೋನಕ್ಕೆ ಪಾಸಿಟಿವ್ ಆದವರ ಸಂಖ್ಯೆ 18,806ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ ಮಕ್ಕಳು ಸೇರಿದಂತೆ 132 ಮಂದಿ ಪುರುಷರು ಹಾಗೂ ಉಳಿದ 105 ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ 52 ಪುರುಷರು ಹಾಗೂ 42 ಮಂದಿ ಮಹಿಳೆಯರಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 123, ಕುಂದಾಪುರ ತಾಲೂಕಿನ 68 ಹಾಗೂ ಕಾರ್ಕಳ ತಾಲೂಕಿನ 46 ಮಂದಿ ಗುರುವಾರ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಡಾ.ಸೂಡ ಹೇಳಿದ್ದಾರೆ.
ಅಲ್ಲದೇ ದಿನದಲ್ಲಿ 379 ಮಂದಿ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಹೀಗೆ ಮನೆಗೆ ತೆರಳಿದವರ ಒಟ್ಟು ಸಂಖ್ಯೆ 16,692ಕ್ಕೇರಿದೆ. ಜಿಲ್ಲೆಯಲ್ಲಿ ಸದ್ಯ 1952 ಸಕ್ರೀಯ ಕೋವಿಡ್ ಪ್ರಕರಣಗಳಿವೆ.
2734 ನೆಗೆಟಿವ್: ಜಿಲ್ಲೆಯಲ್ಲಿ ಗುರುವಾರ ಒಟ್ಟು 2944 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 2734 ಮಂದಿ ನೆಗೆಟಿವ್ ಆಗಿದ್ದು, 237 ಮಂದಿ ಮಾತ್ರ ಪಾಸಿಟಿವ್ ಬಂದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,38,651ಮಂದಿಯನ್ನು ಪರೀಕ್ಷೆ ಗೊಳಪಡಿಸಿದ್ದು ಇವರಲ್ಲಿ 1,19,872 ಮಂದಿ ನೆಗೆಟಿವ್ ಬಂದಿದ್ದಾರೆ. 18806 ಮಂದಿ ಈವರೆಗೆ ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ 16,692 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 162 ಮಂದಿ ಮೃತಪಟ್ಟಿದ್ದಾರೆ.
ಒಬ್ಬ ಬಲಿ: ಗುರುವಾರ ಜಿಲ್ಲೆಯಲ್ಲಿ ಒಬ್ಬರು ಕೋವಿಡ್ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಮಧುಮೇಹದೊಂದಿಗೆ ನ್ಯುಮೋನಿಯದ ಸಮಸ್ಯೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿ ತಾಲೂಕಿನ 68 ವರ್ಷ ಪ್ರಾಯದ ಪುರುಷರಲ್ಲಿ ಕೋವಿಡ್‌ಗೆ ಪಾಸಿಟಿವ್ ಕಂಡುಬಂದು ಉಸಿರಾಟದ ತೊಂದರೆ ಯಿಂದ ಬಳಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.







