ಫ್ಯಾಶನ್, ಡ್ರೆಸ್ ಡಿಸೈನಿಂಗ್‌ನಲ್ಲಿ ಹೊಸ ಅವಿಷ್ಕಾರ ಕುರಿತು ಕಾರ್ಯಗಾರ
ಮಂಗಳೂರು, ಅ.8: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಧಾರವಾಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿನಗರದಲ್ಲಿರುವ ಟ್ರಸ್ಟ್ ಸಭಾಂಗಣದಲ್ಲಿ ಜಿಲ್ಲೆಯ ಆಯ್ದ ನಿರು ದ್ಯೋಗಿ ಮಹಿಳೆಯರಿಗೆ ಉಚಿತ 30 ದಿನಗಳ ಫ್ಯಾಶನ್ ಮತ್ತು ಡ್ರೆಸ್ ಡಿಸೈನಿಂಗ್ ಕೌಶಲ್ಯಾಭಿವೃದ್ಧಿ ಅವಿಷ್ಕಾರ ಕುರಿತು ಕಾರ್ಯಗಾರ ಜರುಗಿತು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಎಂ.ಪಿ. ಮಾತನಾಡಿ ಕೌಶಲ್ಯವನ್ನು ಮೈಗೂಡಿಸಿ ಕೊಂಡು ತಮ್ಮ ಸಾಮರ್ಥ್ಯ ಹಾಗೂ ಆತ್ಮ ವಿಶ್ವಾಸಗಳಿಗೆ ಅನುಸಾರವಾಗಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಅಥವಾ ಸರಕಾರದ ಇತರ ಸಾಲ ಸೌಲಭ್ಯಗಳನ್ನು ಪಡೆಯಲು ರಾಷ್ಟೀಕೃತ ಬ್ಯಾಂಕ್‌ಗಳು ಸರ್ವ ರೀತಿಯ ಸಹಕಾರ ನೀಡಲಿದೆ ಎಂದರು.
ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟ್ರಸ್ಟ್‌ನ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಶಿಕ್ಷಕ ಸುರೇಶ್, ವಸಂತಿ ಮೋಹನಾಂಗಯ್ಯ ಸ್ವಾಮಿ, ಸಿಡಾಕ್‌ನ ತರಬೇತುದಾರ ಪ್ರವಿಷ್ಯ ಹಾಗೂ ವಿದ್ಯಾ ಉಪಸ್ಥಿತರಿದ್ದರು.







