ಅಮೆರಿಕದ ಕವಯಿತ್ರಿ ಲೂಯಿಸ್ ಗ್ಲುಕ್ಗೆ ಸಾಹಿತ್ಯದಲ್ಲಿ ನೊಬೆಲ್ ಪುರಸ್ಕಾರ

ಫೋಟೊ ಕೃಪೆ: twitter.com
ಸ್ಟಾಕ್ಹೋಮ್,ಅ.8: ರಾಯಲ್ ಸ್ವೀಡಿಷ್ ಅಕಾಡೆಮಿಯು 2020ನೇ ಸಾಲಿನ ನೊಬೆಲ್ ಸಾಹಿತ್ಯ ಪುರಸ್ಕಾರಕ್ಕಾಗಿ ಅಮೆರಿಕದ ಕವಯಿತ್ರಿ ಲೂಯಿಸ್ ಗ್ಲುಕ್ ಅವರನ್ನು ಆಯ್ಕೆ ಮಾಡಿರುವುದಾಗಿ ಗುರುವಾರ ಪ್ರಕಟಿಸಿದೆ. ಸರಳ ಸುಂದರತೆಯೊಂದಿಗೆ ವ್ಯಕ್ತಿಗತ ಅಸ್ತಿತ್ವವನ್ನು ಸಾರ್ವತ್ರಿಕಗೊಳಿಸುವ ಸುಸ್ಪಷ್ಟ ಕಾವ್ಯಾತ್ಮಕ ಧ್ವನಿಗಾಗಿ ಈ ಪುರಸ್ಕಾರಕ್ಕೆ ಗ್ಲುಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅದು ತಿಳಿಸಿದೆ.
1943ರಲ್ಲಿ ನ್ಯೂಯಾರ್ಕ್ನಲ್ಲಿ ಜನಿಸಿದ್ದ ಗ್ಲುಕ್ ಕ್ಯಾಂಬ್ರಿಜ್ನಲ್ಲಿ ವಾಸವಾಗಿದ್ದಾರೆ. ಬರವಣಿಗೆಯ ಜೊತೆಗೆ ಅವರು ಕನೆಕ್ಟಿಕಟ್ ನ್ಯೂಹೆವನ್ನ ಯೇಲ್ ವಿವಿಯಲ್ಲಿ ಇಂಗ್ಲಿಷ್ ಪ್ರೊಫೆಸರ್ ಕೂಡ ಆಗಿದ್ದಾರೆ.
1968ರಲ್ಲಿ ತನ್ನ ಮೊದಲ ಕವನ ಸಂಕಲನ ‘ಫಸ್ಟ್ ಬಾರ್ನ್ ’ಅನ್ನು ಪ್ರಕಟಿಸಿ ಸಾಹಿತ್ಯಲೋಕವನ್ನು ಪ್ರವೇಶಿಸಿದ್ದ ಗ್ಲುಕ್ ಶೀಘ್ರವೇ ಅಮೆರಿಕನ್ ಸಮಕಾಲೀನ ಸಾಹಿತ್ಯದಲ್ಲಿ ಪ್ರತಿಷ್ಠಿತ ಸಾಹಿತಿಗಳಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದರು. ಪುಲಿಟ್ಝರ್ ಪ್ರಶಸ್ತಿ (1993) ಮತ್ತು ನ್ಯಾಷನಲ್ ಬುಕ್ ಆವಾರ್ಡ್ (2014) ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಅವರು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ನೊಬೆಲ್ ಪುರಸ್ಕಾರವು ಸ್ವರ್ಣ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನಾ (ಅಂದಾಜು 8.20 ಕೋ.ರೂ.)ಗಳನ್ನು ಒಳಗೊಂಡಿದೆ.







