ಟ್ರಂಪ್‌ರಿಂದ ಸ್ನೇಹಿತರಿಗೆ ವಿಶ್ವಾಸದ್ರೋಹ, ಸರ್ವಾಧಿಕಾರಿಗಳ ಆಲಿಂಗನ: ಕಮಲಾ ಹ್ಯಾರಿಸ್

ವಾಶಿಂಗ್ಟನ್, ಅ. 8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘‘ನಮ್ಮ ಸ್ನೇಹಿತರಿಗೆ ವಿಶ್ವಾಸದ್ರೋಹ ಮಾಡಿದ್ದಾರೆ ಮತ್ತು ಸರ್ವಾಧಿಕಾರಿಗಳನ್ನು ಆಲಿಂಗಿಸಿದ್ದಾರೆ’’ ಎಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಬುಧವಾರ ಹೇಳಿದ್ದಾರೆ.
ಟ್ರಂಪ್‌ರ ಏಕಪಕ್ಷೀಯ ವಿದೇಶ ನೀತಿಯನ್ನು ಖಂಡಿಸಿದ ಕಮಲಾ, ಈ ನೀತಿಯಿಂದಾಗಿ ಅಮೆರಿಕವು ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಹಿಂದೆ ಸರಿಯುವಂತಾಯಿತು ಹಾಗೂ ನಮ್ಮ ದೇಶದ ಸುರಕ್ಷತೆಯು ಕ್ಷೀಣಿಸಿತು ಎಂದು ಅವರು ಹೇಳಿದರು.
ಅವರು ಉಟಾ ರಾಜ್ಯದ ಸಾಲ್ಟ್‌ಲೇಕ್ ಸಿಟಿಯಲ್ಲಿ ಬುಧವಾರ ರಾತ್ರಿ ನಡೆದ 2020ರ ಅಧ್ಯಕ್ಷೀಯ ಚುನಾವಣೆಯ ಉಪಾಧ್ಯಕ್ಷ ಅಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
‘‘ನಮ್ಮ ಗೆಳೆಯರಿಗೆ ನಾವು ನೀಡಿರುವ ಮಾತುಗಳನ್ನು ಉಳಿಸಿಕೊಳ್ಳಬೇಕಾಗಿದೆ. ನಾವು ನಮ್ಮ ಸ್ನೇಹಿತರಿಗೆ ನಿಷ್ಠೆ ಹೊಂದಿರಬೇಕಾಗಿದೆ. ನಮ್ಮ ಪರವಾಗಿ ಯಾರು ನಿಲ್ಲುತ್ತಾರೋ, ನಾವು ಅವರ ಪರವಾಗಿ ಧ್ವನಿ ಎತ್ತಬೇಕಾಗಿದೆ’’ ಎಂದು 90 ನಿಮಿಷಗಳ ಮುಖಾಮುಖಯಲ್ಲಿ ಮಾತನಾಡಿದ 55 ವರ್ಷದ ಡೆಮಾಕ್ರಟಿಕ್ ಉಪಾಧ್ಯಕ್ಷ ಅಭ್ಯರ್ಥಿ ಹೇಳಿದರು.
‘‘ಡೊನಾಲ್ಡ್ ಟ್ರಂಪ್ ನಮ್ಮ ಗೆಳೆಯರಿಗೆ ಮೋಸ ಮಾಡಿದ್ದಾರೆ ಹಾಗೂ ಜಗತ್ತಿನಾದ್ಯಂತ ಸರ್ವಾಧಿಕಾರಿಗಳನ್ನು ಆಲಿಂಗಿಸಿದ್ದಾರೆ’’ ಎಂದು ಕಮಲಾ ಹೇಳಿದರು.
ಇದನ್ನು ಬಲವಾಗಿ ವಿರೋಧಿಸಿದ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಮೈಕ್ ಪೆನ್ಸ್, ಟ್ರಂಪ್ ಆಡಳಿತವು ನಮ್ಮ ಸ್ನೇಹಿತರ ಪರವಾಗಿ ಪ್ರಬಲವಾಗಿ ನಿಂತಿದೆ’’ ಎಂದರು.







