ಮಂಗಳೂರು ವಿವಿ : ಪದವಿ ಮಟ್ಟದ ಇಂಟರ್‌ಮೀಡಿಯೇಟ್ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ
ಮಂಗಳೂರು, ಅ.8: ಕೋವಿಡ್ -19 ಹಿನ್ನೆಲೆಯಲ್ಲಿ ಯುಜಿಸಿ ಹಾಗೂ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ 2019-20ನೇ ಸಾಲಿನ ವ್ಯಾಸಂಗದಲ್ಲಿ ತೊಡಗಿರುವ ಪದವಿ ಮಟ್ಟದ ಇಂಟರ್‌ಮೀಡಿಯೇಟ್ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್/ವರ್ಷಕ್ಕೆ ಭಡ್ತಿ ನೀಡುವ ಸಲುವಾಗಿ ವಿದ್ಯಾರ್ಥಿಗಳ ಹಿಂದಿನ ಸೆಮಿಸ್ಟರ್‌ಗಳ ಒಟ್ಟು ಅಂಕಗಳ ಶೇ. 50 ಮತ್ತು ಪ್ರಸಕ್ತ ಸೆಮಿಸ್ಟರ್‌ನ ಆಂತರಿಕ ಅಂಕಗಳನ್ನು ಶೇ.50ಕ್ಕೆ ಏರಿಕೆ ಮಾಡಿ ಮಂಗಳೂರು ವಿವಿಯು ಫಲಿತಾಂಶವನ್ನು (www.mangaloreuniversity.ac.in) ಪ್ರಕಟಿಸಿದೆ.
ಇದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುವುದು ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರ ಪ್ರಕಟನೆ ತಿಳಿಸಿದೆ.
ಭಡ್ತಿಗೊಳಪಡುವ ವಿದ್ಯಾರ್ಥಿಗಳಿಗೆ ಫಲಿತಾಂಶದಲ್ಲಿ ಅಸಮಾಧಾನವಿದ್ದಲ್ಲಿ, ಫಲಿತಾಂಶವನ್ನು ತಿರಸ್ಕರಿಸಿ ಮುಂದಿನ ಪರೀಕ್ಷೆಗಳಲ್ಲಿ ಹಾಜರಾ ಗಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಆಯಾ ಕಾಲೇಜು ಮೂಲಕ ಪೂರ್ವನುಮತಿಗಾಗಿ ವಿವಿಗೆ 30 ದಿನದೊಳಗೆ ಮನವಿ ಸಲ್ಲಿಸಬಹು ದಾಗಿದೆ. ಹಿಂದಿನ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ವಿವಿಯು ಮುಂದೆ ನಡೆಸಲ್ಪಡುವ ಪರೀಕ್ಷೆಯಲ್ಲಿ ತಮ್ಮ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಭಡ್ತಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಆಂತರಿಕ ಅಂಕಗಳನ್ನು ಸಲ್ಲಿಸದಿರುವ ವಿದ್ಯಾರ್ಥಿಗಳ ಫಲಿತಾಂಶ ವನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟು 34 ಕೋರ್ಸ್‌ಗೆ ಸಂಬಂಧಿಸಿ 43,984 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 30,285 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 13,699 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, 853 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







