ಯುಜಿಡಿ ಸಂಪರ್ಕಕ್ಕೆ ಮನೆ ಮಾಲಕರಿಂದ ಹಣ ವಸೂಲಿ ಸರಿಯಲ್ಲ: ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್
ಚಿಕ್ಕಮಗಳೂರು, ಅ.8: ನಗರದ ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸರಕಾರ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ ಪೂರ್ಣ ಕಾಮಗಾರಿ ನಿರ್ವಹಿಸದೇ ಗುತ್ತಿಗೆದಾರ ಈ ಕಾಮಗಾರಿಯ ಬಿಲ್ ಪಡೆದು ನಾಪತ್ತೆಯಾಗಿದ್ದಾನೆ. ಗುತ್ತಿಗೆದಾರನಿಂದ ಹಣ ವಸೂಲಿ ಮಾಡಬೇಕಾದ ನಗರಸಭೆ ಹಾಗೂ ಕ್ಷೇತ್ರದ ಶಾಸಕ ಸಿ.ಟಿ.ರವಿ ಯುಜಿಡಿ ಸಂಪರ್ಕ ಕಲ್ಪಿಸಲು ಸಾರ್ವಜನಿಕರಿಂದಲೇ ಹಣ ವಸೂಲು ಮಾಡುತ್ತಿರುವುದು ಸರಿಯಲ್ಲ. ಯುಜಿಡಿ ಸಂಪರ್ಕವನ್ನು ಉಚಿತವಾಗಿ ನಗರಸಭೆಯಿಂದಲೇ ಕಲ್ಪಿಸಬೇಕೆಂದು ನಗರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದ ಗೌರಿಕಾಲುವೆ, ಜಯನಗರ ಸೇರಿದಂತೆ ಕೆಲವು ವಾರ್ಡುಗಳಲ್ಲಿ ವಿಶೇಷ ಅನುದಾನದಡಿಯಲ್ಲಿ ರಸ್ತೆಗಳ ಡಾಂಬರೀಕರಣಕ್ಕೆ ಹಣ ಮಂಜೂರಾಗಿದೆ. ಈ ಕಾರಣಕ್ಕೆ ರಸ್ತೆ ಡಾಂಬರೀಕರಣ ಆಗುವ ಮುನ್ನ ಒಳಚರಂಡಿ ವ್ಯವಸ್ಥೆ ಮಾಡಬೇಕು, ನಂತರ ರಸ್ತೆ ಅಗೆಯಲು ಸಾಧ್ಯವಿಲ್ಲ ಎಂದು ನಗರಸಭೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮಧ್ಯೆ ಖಾಸಗಿ ಗುತ್ತಿಗೆದಾರರ ಮುಖಾಂತರ ಒಳಚರಂಡಿಗೆ ಮನೆಗಳ ಸಂಪರ್ಕ ಕಲ್ಪಿಸುವ ಕೆಲಸ ಮಾಡಿಸುತ್ತಿದ್ದಾರೆ. ಅಲ್ಲದೇ ಪ್ರತೀ ಸಂಪರ್ಕಕ್ಕೆ ಮನಬಂದಂತೆ ಹಣ ವಸೂಲಿ ಮಾಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಒಳಚರಂಡಿ ಸಂಪರ್ಕಕ್ಕೆ ಮನೆಗಳ ಮಾಲಕರಿಂದ ಹಣವನ್ನು ವಸೂಲಿ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಆಯುಕ್ತರು, ಇಂಜಿನಿಯರ್ ಬಳಿ ಮಾತನಾಡಿದರೇ, ನಗರಸಭೆಗೂ ಇದಕ್ಕೂ ಸಂಬಂಧವಿಲ್ಲ. ನಗರಸಭೆಗೆ ಗುತ್ತಿಗೆದಾರ ಯಾವುದೇ ರೀತಿಯ ಕಟ್ಟುತ್ತಿಲ್ಲ ಎನ್ನುತ್ತಿದ್ದಾರೆ.
ನಗರಸಭೆ ಎಇಇ ರಶ್ಮಿ ಅವರನ್ನು ವಿಚಾರಿಸದರೇ, ಯುಜಿಡಿ ಸಂಪರ್ಕ ಕಲ್ಪಿಸಲು ಗುತ್ತಿಗೆದಾರರನ್ನು ನಾವೇ ಕಳಿಸಿದ್ದೇವೆ. ರಸ್ತೆ ಡಾಂಬರೀಕರಣ ಮಾಡುವ ಮುನ್ನ ಯುಜಿಡಿ ಸಂಪರ್ಕ ಆಗಲೇಬೇಕು. ಈ ಗುತ್ತಿಗೆದಾರ ಹೆಚ್ಚು ಹಣ ಕೇಳಿದರೇ ಸಾರ್ವಜನಿಕರು ಬೇರೆಯವರ ಮೂಲಕ ಯುಜಿಡಿ ಸಂಪರ್ಕ ಪಡೆದುಕೊಳ್ಳಲಿ ಎನ್ನುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಈ ಸಂಬಂಧ ಗೊಂದಲ ಮೂಡಿಸುತಿದ್ದಾರೆಂದು ಆರೋಪಿಸಿದ್ದಾರೆ.
ಯುಜಿಡಿ ಕಾಮಗಾರಿಗೆ ಕೋಟಿಗಟ್ಟಲೆ ಹಣವನ್ನು ಸರಕಾರ ಈ ಹಿಂದೆಯೇ ಮಂಜೂರು ಮಾಡಿದೆ. ಮನೆಗಳ ಸಂಪರ್ಕ ನೀಡುವ ಕಾಮಗಾರಿ ಈ ಪ್ಯಾಕೇಜ್‍ನಡಿಯಲ್ಲೇ ಸೇರಿದೆ. ಆದರೆ ನಗರಸಭೆ ಅಧಿಕಾರಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಸರಕಾರದಿಂದ ಮತ್ತೆ ಅನುದಾನ ತಂದು, ಇಲ್ಲವೇ ನಗರಸಭೆ ಅನುದಾನದಲ್ಲೇ ಯುಜಿಡಿ ಸಂಪರ್ಕ ಕಾಮಗಾರಿ ಕಲ್ಪಿಸಲು ಸಂಬಂಧಿಸಿದ ಸಚಿವರು, ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.
ಗೌರಿಕಾಲುವೆಯಲ್ಲಿ ಮಾಜಿ ನಗರಸಭೆ ಸದಸ್ಯರೊಬ್ಬರು ಶಿವರಾಮ್ ಕಾರಂತ್ ರಸ್ತೆ, 60 ಫೀಟ್ ರಸ್ತೆ, ಅಕ್ಮಲ್ ಅಪಾಟ್ರ್ಮೆಂಟ್ ರಸ್ತೆ, ಜೈರಾಜ್ ಅರಸ್ ರಸ್ತೆಗಳಿಗೆ ಗುತ್ತಿಗೆದಾರರನ್ನು ಕರೆದುಕೊಂಡು ಹೋಗಿ ಯುಜಿಡಿ ಸಂಪರ್ಕಕ್ಕೆ ಮನೆಗಳ ಮಾಲಕರಿಂದ ನಾಲ್ಕು ಸಾವಿರ, ಐದು ಸಾವಿರ, ಆರು ಸಾವಿರ ಎಂದು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹಣ ವಸೂಲಿ ಮಾಡಿದ್ದಾರೆ. ವಿಷಯ ತಿಳಿದು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಗಲಾಟೆ ಮಾಡಿದ ಮೇಲೆ ಕೆಲವರಿಗೆ ಗುತ್ತಿಗೆದಾರ ಸಾವಿರ ರೂಪಾಯಿಯ ವರೆಗೆ ಹಣ ಹಿಂದಿರುಗಿಸಿದ್ದಾರೆ. ಹೊಸರಸ್ತೆ ಆಗುತ್ತದೆ ಎಂಬ ಆಸೆಯಿಂದ ಸಾರ್ವಜನಿಕರು ಕೊರೋನ ಸಂದರ್ಭದಲ್ಲೂ ಕೂಲಿ ಇಲ್ಲದೆ, ಕೆಲಸವಿಲ್ಲದೆ, ವ್ಯಾಪಾರವಿಲ್ಲದೆ ಬಡ್ಡಿಗೆ ಹಣ ಜನ ತಂದು ಗುತ್ತಿಗೆದಾರನಿಗೆ ನೀಡುತ್ತಿದ್ದಾರೆ. ಸಾರ್ವಜನಿಕರ ಮೇಲಿನ ಈ ಹೊರೆ ತಪ್ಪಿಸಲು ನಗರಸಭೆ ಅಧಿಕಾರಿಗಳು, ಸಚಿವ ಸಿ.ಟಿ.ರವಿ ಅವರು ಸಾರ್ವಜನಿಕರಿಂದ ಗುತ್ತಿಗೆದಾರ ವಸೂಲಿ ಮಾಡಿರುವ ಹಣವನ್ನು ಹಿಂದಿರುಗಿಸಿಕೊಡಬೇಕು. ಒಳಚರಂಡಿ ಸಂಪರ್ಕ ಕಲ್ಪಿಸಲು ಸರಕಾರದ ಹಣ ಬಳಕೆ ಮಾಡಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.







