ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಶಾಲೆ ತೆರೆಯುವುದು ಬೇಡ : ಮಾಜಿ ಸಿಎಂ ಸಿದ್ದರಾಮಯ್ಯ
![ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಶಾಲೆ ತೆರೆಯುವುದು ಬೇಡ : ಮಾಜಿ ಸಿಎಂ ಸಿದ್ದರಾಮಯ್ಯ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಶಾಲೆ ತೆರೆಯುವುದು ಬೇಡ : ಮಾಜಿ ಸಿಎಂ ಸಿದ್ದರಾಮಯ್ಯ](https://www.varthabharati.in/sites/default/files/images/articles/2020/10/9/262578-1602234616.jpg)
ಬೆಂಗಳೂರು : ಕೋವಿಡ್-19 ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಯಾವ ಕಾರಣಕ್ಕೂ ತೆರೆಯಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ನಗರ ಪ್ರದೇಶಗಳ ಖಾಸಗಿ ಶಾಲೆಗಳ ಮಕ್ಕಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ. ರಾಜ್ಯದ ಎಲ್ಲಾ ಮಕ್ಕಳಿಗೂ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸುವುದು ಕೂಡ ಅಗತ್ಯ ಎಂದು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಸರ್ಕಾರ ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ. ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸು ಮಾಡಿ ಮುಂದಿನ ತರಗತಿಗಳಿಗೆ ಕಳುಹಿಸಬೇಕೆಂದು ಮತ್ತು ಪರಿಸ್ಥಿತಿ ಹತೋಟಿಗೆ ಬಂದ ನಂತರ ಮತ್ತೊಮ್ಮೆ ಎಲ್ಲರ ಅಭಿಪ್ರಾಯಗಳನ್ನು ಪಡೆದು ಶಾಲೆಗಳನ್ನು ಪ್ರಾರಂಭಿಸ ಬಹುದೆಂದು ತಮಗೆ ಸಲಹೆ ನೀಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಶಾಲೆಗಳನ್ನು ತೆರೆಯುವ ಕುರಿತಂತೆ ಅಭಿಪ್ರಾಯಗಳನ್ನು/ಸಲಹೆಗಳನ್ನು ಸಂಗ್ರಹಿಸುವ ಕುರಿತಾದ ನಿಮ್ಮ ಪತ್ರ ನನಗೆ ಅ.7 ರಂದು ತಲುಪಿದೆ. ಸಮಾಜದ ಮತ್ತು ವಿರೋಧ ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿರುವುದಕ್ಕಾಗಿ ತಮಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಕೊರೋನಾ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದ ಉಳಿದೆಡೆಗಿಂತ ಕರ್ನಾಟಕದಲ್ಲಿ ಭೀಕರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಟೆಸ್ಟ್ ಗಳ ಸಂಖ್ಯೆ ಹೆಚ್ಚಿಸಿದಂತೆಲ್ಲಾ ಪ್ರಕರಣಗಳ ಸಂಖ್ಯೆಯೂ ಹೆಚ್ಚು ಪತ್ತೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ತಜ್ಞರ ಮಾತುಗಳ ಪ್ರಕಾರ ಈ ವರ್ಷ ಜೀವ ಉಳಿಸಿಕೊಳ್ಳಬೇಕೇ ಹೊರತು ಉಳಿದೆಲ್ಲವನ್ನು ನಗಣ್ಯವೆಂದು ಭಾವಿಸಬೇಕು. ಹಿಂದೆ ವಿವಿಧ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಸ್ವತ: ನಾನೇ ಬೆಂಬಲಿಸಿದ್ದೆ. ಆದರೆ ಇಂದಿನ ಪರಿಸ್ಥಿತಿಯೆ ಬೇರೆಯಾಗಿದೆ. ಅಂಕಿ ಅಂಶಗಳನ್ನು ತಿರುಚುವ ಮೂಲಕ ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಸರ್ಕಾರದ ಬೆನ್ನನ್ನು ಜನರು ತಟ್ಟಬೇಕೇ ಹೊರತು ಸರ್ಕಾರವೇ ತಟ್ಟಿಕೊಂಡರೆ ಹಾಸ್ಯಾಸ್ಪದವಾಗುತ್ತದೆ ಎಂದು ಸಿದ್ದರಾಮಯ್ಯ, ಸಚಿವ ಸುರೇಶ್ ಕುಮಾರ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.