ನಟಿಯರ ನ್ಯಾಯಾಂಗ ಬಂಧನ ವಿಸ್ತರಣೆ: ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಸಂಜನಾ

ಬೆಂಗಳೂರು, ಅ.9: ಡ್ರಗ್ಸ್ ಪ್ರಕರಣ ಸಂಬಂಧ ಕಾರಾಗೃಹದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ನೀಡಲು ನಿರಾಕರಿಸಿರುವ ಎನ್‍ಡಿಪಿಎಸ್ ಕೋರ್ಟ್ ಇಬ್ಬರಿಗೂ ಅ.23ರವರೆಗೂ ನ್ಯಾಯಾಂಗ ಬಂಧನ ವಿಸ್ತರಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸಂಜನಾ ಪರ ವಕೀಲರಿಂದ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿಯ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ನಟಿ ಸಂಜನಾ ಮನೆ ಮೇಲೆ ಸೆ.8ರಂದು ದಾಳಿ ಮಾಡಿದ್ದರು. ಬಳಿಕ ಅವರನ್ನು ವಶಕ್ಕೆ ಪಡೆದು 8 ದಿನಗಳ ಕಾಲ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಸೆ.16ರಂದು ಎನ್‍ಡಿಪಿಎಸ್ ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು. ಅಂದಿನಿಂದ ಸಂಜನಾ ಕಾರಾಗೃಹದಲ್ಲಿದ್ದಾರೆ
ಅಕ್ರಮ ಹಣ ವರ್ಗಾವಣೆ, ಹೂಡಿಕೆ ಮತ್ತು ಆಸ್ತಿಗಳ ಖರೀದಿ ಕುರಿತು ಇಡಿ ತನಿಖೆ ಕೈಗೊಂಡಿದೆ. ಜಾರಿ ನಿರ್ದೇಶನಾಲಯ ಐದು ದಿನಗಳ ಕಾಲ ನಟಿಯರನ್ನು ವಶಕ್ಕೆ ಪಡೆದು ಜೈಲಿನಲ್ಲಿಯೇ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.





