ಧಾರಾಕಾರ ಮಳೆ: ತಡೆಗೋಡೆ ಕುಸಿದು ವ್ಯಕ್ತಿ ಸಾವು, ಮೂರು ವಾಹನಗಳು ಜಖಂ

ಮೈಸೂರು,ಅ.9: ಮೈಸೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಕಾಂಪೌಡ್ ಗೋಡೆ ಕುಸಿದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಕುವೆಂಪುನಗರದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ನಂಜುಂಡಸ್ವಾಮಿ(56) ಅರವಿಂದ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಮೈಸೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ಈ ವೇಳೆ ನಡೆದುಕೊಂಡು ಹೋಗುತ್ತಿದ್ದ ನಂಜುಂಡಸ್ವಾಮಿ ಅವರ ಮೇಲೆ ಕುವೆಂಪುನಗರದ ಬಸ್ ಡಿಪೋದ ಹಳೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದ್ದು, ಗೋಡೆ ಅಡಿಗೆ ಸಿಲುಕಿದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗೆ ಪಕ್ಕದಲ್ಲಿ ನಿಲ್ಲಿಸಿದ್ದ ಮೂರು ವಾಹನಗಳು ಜಖಂಗೊಂಡಿವೆ.
ಸ್ಥಳಕ್ಕೆ ಸ್ಥಳೀಯ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಸಾಂತ್ವಾನ ಹೇಳಿದರು. ಘಟನೆ ಸಂಬಂಧ ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಈ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





