ನಟಿ ಕಂಗನಾ ರಾಣಾವತ್ ವಿರುದ್ಧ ಎಫ್‌ಐಆರ್ ದಾಖಲಿಸಲು ತುಮಕೂರು ಕೋರ್ಟ್ ಆದೇಶ

ಬೆಂಗಳೂರು, ಅ.9: ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಆರೋಪದಡಿ ಬಾಲಿವುಡ್ ನಟಿ ಕಂಗನಾ ರಾಣಾವತ್ ವಿರುದ್ಧ ಎಫ್‌ಐಆರ್ ದಾಖಲಿಸಲು ತುಮಕೂರು ಜೆಎಂಎಫ್‌ಸಿ ಕೋರ್ಟ್ ಪೊಲೀಸರಿಗೆ ಸೂಚಿಸಿದೆ.
ಕೇಂದ್ರ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ ರೈತರನ್ನು ಪರೋಕ್ಷವಾಗಿ ಕಂಗನಾ ರಣಾವತ್ ಭಯೋತ್ಪಾದಕರಿಗೆ ಹೋಲಿಸಿದ್ದರು. ಕಂಗನಾ ಅವರ ಹೇಳಿಕೆ ಖಂಡಿಸಿ ಹೈಕೋರ್ಟ್ ವಕೀಲ ರಮೇಶ್ ನಾಯಕ್ ಅವರು ತುಮಕೂರು ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದರು.
ಈ ಪ್ರಕರಣ ಕುರಿತು ಅ.5ರಂದು ಅರ್ಜಿ ವಿಚಾರಣೆ ನಡೆದಿತ್ತು. ಆದರೆ, ಅ.9ರಂದು ಆದೇಶ ಕಾಯ್ದಿರಿಸಿತ್ತು. ಶುಕ್ರವಾರ ಕೋರ್ಟ್ ಆದೇಶ ನೀಡಿದ್ದು, ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸಲು ತುಮಕೂರು ನಗರದ ಕ್ಯಾತಸಂದ್ರ ಪೊಲೀಸ್ ಠಾಣೆಗೆ ಸೂಚಿಸಿದೆ.
‘ಸಿಎಎಯಿಂದ ಒಬ್ಬರ ನಾಗರಿಕತೆಯೂ ಹೋಗಲಿಲ್ಲ, ಆದರೆ, ಇವರು ರಕ್ತದ ನದಿಯನ್ನೇ ಹರಿಸಿದರು. ಅದೇ ಭಯೋತ್ಪಾದಕರು ಈಗ ಮತ್ತೆ ಪ್ರತಿಭಟಿಸುತ್ತಿದ್ದಾರೆ. ಮಲಗಿರುವವರನ್ನು ಎಬ್ಬಿಸಬಹುದು, ತಪ್ಪು ತಿಳಿದಿರುವವರಿಗೆ ಸರಿಯಾದ ಮಾಹಿತಿ ಕೊಡಬಹುದು. ಆದರೆ, ಮಲಗಿರುವಂತೆ ನಟಿಸುತ್ತಿರುವವರಿಗೆ, ದಡ್ಡರಂತೆ ನಟಿಸುತ್ತಿರುವವರಿಗೆ ಏನು ತಿಳಿಹೇಳಿದರೆ ಏನು ಪ್ರಯೋಜನ’ ಎಂದು ಕಂಗನಾ ಟ್ವೀಟ್ ಮಾಡಿದ್ದರು.
''ಕ್ಷಮೆ ಕೇಳುತ್ತೇನೆ''
ಕಂಗನಾ ಟ್ವೀಟ್‌ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾರನೇಯ ದಿನ ಮತ್ತೊಂದು ಟ್ವೀಟ್ ಮಾಡಿದ ಕಂಗನಾ, ಪಪ್ಪುವಿನ ಸೇನೆ ಸುಳ್ಳು ಸುದ್ದಿಗಳನ್ನು ಇಟ್ಟುಕೊಂಡು ಗಲಾಟೆಗಳನ್ನು ಮಾಡುತ್ತಿದೆ ಎಂದಿದ್ದಾರೆ. ನಾನು ರೈತರನ್ನು ಭಯೋತ್ಪಾದಕರು ಎಂದಿಲ್ಲ, ನಾನು ಹಾಗೆ ಹೇಳಿದ್ದಾಗಿ ಸಾಬೀತು ಮಾಡಿದರೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದರು.







