ಚಲನಚಿತ್ರ ಅಕಾಡೆಮಿಯಿಂದ ಚಲನಚಿತ್ರ ಭಂಡಾರ ಸ್ಥಾಪನೆ: ಸುನೀಲ್ ಪುರಾಣಿಕ್
ಬೆಂಗಳೂರು, ಅ.9: ಕನ್ನಡ ಚಿತ್ರರಂಗ ಐತಿಹಾಸಿಕ ದಾಖಲೆಗಳ ಕ್ರೋಡೀಕೃತ ಪ್ರಾಚ್ಯಗಾರ ಕರ್ನಾಟಕ ಚಲನಚಿತ್ರ ಭಂಡಾರ ಸ್ಥಾಪಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕನ್ನಡ ಸೇರಿದಂತೆ ಜಗತ್ತಿನ ಎಲ್ಲಾ ಭಾಷೆಗಳ ಶ್ರೇಷ್ಠ ಚಲನಚಿತ್ರಗಳನ್ನು ಸಂಗ್ರಹಿಸಿ ಡಿಜಿಟಲ್ ಮಾಡಿಸಿ, ಆಸಕ್ತರು ಮತ್ತು ಸಂಶೋಧಕರ ವೀಕ್ಷಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಚಲನಚಿತ್ರ ಭಂಡಾರ ರೂಪುಗೊಳ್ಳುತ್ತಿದೆ ಎಂದರು.
ಪೂನಾದಲ್ಲಿರುವ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಗಾರ ಮತ್ತು ಮುಂಬೈನಲ್ಲಿರುವ ಭಾರತೀಯ ಚಲನಚಿತ್ರಗಳ ರಾಷ್ಟ್ರೀಯ ಸಂಗ್ರಹಾಲಯದ ಮಾದರಿಯಲ್ಲಿ ಚಲನಚಿತ್ರ ಭಂಡಾರ ಸ್ಥಾಪಿಸಲು ಉದ್ದೇಶಿಸಲಾಗಿದೆ. ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ತರುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ಚಟುವಟಿಕೆಗಳು ಆರಂಭವಾಗಿವೆ ಎಂದು ಪುರಾಣಿಕ್ ಹೇಳಿದರು.
ಚಲನಚಿತ್ರ ಆಸಕ್ತರು ಮತ್ತು ಸಂಶೋಧಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿರುವ ಹಿನ್ನೆಲೆಯಲ್ಲಿ ಚಲನಚಿತ್ರಗಳ ಪ್ರಿಂಟ್ಗಳು, ಬೀಟಾ ಪ್ರತಿಗಳು, ಪ್ರಚಾರದ ಸ್ಥಿರ ಚಿತ್ರಗಳು, ಹಾಡುಗಳು, ಪುಸ್ತಕಗಳು, ಕರಪತ್ರಗಳು, ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಪುಸ್ತಕಗಳು, ಲಾಬಿ ಕಾಡ್ರ್ಸ್ ಹೀಗೆ ಹಲವು ಚಿತ್ರಗಳಿಗೆ ಸಂಬಂಧಿಸಿದ ಮಾಹಿತಿಗಳು ಮತ್ತು ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಚಲನಚಿತ್ರ ಭಂಡಾರ ಸ್ಥಾಪನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಂದು ಕೋಟಿ ರೂ.ಗಳ ನೆರವು ನೀಡಿದ್ದು, ಈ ಅನುದಾನದ ನೆರವಿನಲ್ಲಿ ಭಂಡಾರದ ನಿರ್ವಹಣೆ ಆಗಲಿದೆ ಎಂದರು.
ನಂದಿನಿ ಬಡಾವಣೆಯಲ್ಲಿರುವ ಕನ್ನಡ ಚಲನಚಿತ್ರ ಅಮೃತೋತ್ಸವ ಭವನದ ನೆಲಮಹಡಿಯಲ್ಲಿ ಚಲನಚಿತ್ರ ಭಂಡಾರದ ಕಚೇರಿ ತೆರೆಯಲಿದೆ. ಚಿತ್ರಕತೆ ಮತ್ತು ಸಂಭಾಷಣೆಗಳು, ಚಲನಚಿತ್ರ ಸಂಬಂಧಿಸಿದ ಪುಸ್ತಕಗಳು, ಕೊಡವ, ಕೊಂಕಣಿ, ಬಂಜಾರ, ತುಳು ಮತ್ತು ಬ್ಯರಿ ಸೇರಿದಂತೆ ಕರ್ನಾಟಕದ ಇತರ ಭಾಷೆಯಲ್ಲಿ ತಯಾರಾದ ಚಿತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಬಿಡಿಎ ಚಲನಚಿತ್ರ ಭಂಡಾರಕ್ಕೆ ನೀಡುವಂತೆ ಅವರು ಮನವಿ ಮಾಡಿದರು.