ಕಾಪು ಪ್ರವಾಸಿ ಬಂಗ್ಲೆಯಲ್ಲಿ ಸರ್ಕಾರಿ ಸಮುಚ್ಛಯ: ಲಾಲಾಜಿ ಮೆಂಡನ್

ಕಾಪು : ಕಾಪು ಪ್ರವಾಸಿ ಬಂಗ್ಲೆ ಆವರಣದ ಸುಮಾರು 4 ಎಕರೆ ಜಮೀನಿನಲ್ಲಿ ಕಾಪು ತಾಲ್ಲೂಕು ಮಿನಿ ವಿಧಾನಸೌಧ ಸಹಿತ ವಿವಿಧ ಸರ್ಕಾರಿ ಸಮುಚ್ಛಯವಾಗಿ ಮಾರ್ಪಾಡಿಸಿ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿಸಲಾಗುವುದು ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಮಿನಿ ವಿಧಾನಸೌಧ ನಿರ್ಮಾಣ ಕುರಿತಂತೆ ಅಧಿಕಾರಿಗಳೊಂದಿಗೆ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಪು ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಶಿಲಾನ್ಯಾಸ ನೆರವೇರಿಸಲಾಗುವುದು ಎಂದರು.
ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಕಚೇರಿ ಸಹಿತ 30 ಇಲಾಖೆಗಳು ಕಾರ್ಯಾಚರಿಸಲಿವೆ. ಕರ್ನಾಟಕ ಗೃಹ ಮಂಡಳಿ ಮೂಲಕ ನಿರ್ಮಾಣ ವಾಗುವ ಯೋಜನೆಗೆ ಪ್ರಾಥಮಿಕ ಅನುದಾನ ಬಿಡುಗಡೆಗಾಗಿ ಆರ್ಥಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೂ ಮನವಿ ಮಾಡಲಾಗಿದೆ ಎಂದರು.
ತಾಲ್ಲೂಕು ಮ್ಯಾಜೀಸ್ಟ್ರೇಟ್ ಕಚೇರಿ, ತಾಲ್ಲೂಕು ನ್ಯಾಯಾಲಯ ಒಳಗೊಂಡು ನೀಲಿ ನಕಾಶೆ ಸಿದ್ಧವಾಗಿದೆ. ಬಂಗ್ಲೆ ಆವರಣದಲ್ಲಿರುವ ವಸತಿ ಗೃಹಗಳನ್ನು ತೆರವು ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಾಪು ಬೀಚ್ ಅಭಿವೃದ್ಧಿ ಕುರಿತಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರದ ಮೂಲಕ 3.5 ಎಕರೆಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ನೀಲಿನಕಾಶೆ ತಯಾರಾಗಿದೆ. ರಾಜ್ಯದ ಸರ್ಕಾರದ ಅನುದಾನದಿಂದ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಸಹಿತ ನದಿ ಭಾಗವನ್ನು ಅಭಿವೃದ್ಧಿಪಡಿಸಿ ಯೋಜನೆಗಳನ್ನು ಹಂತಹಂತವಾಗಿ ಕಾರ್ಯಗತ ಮಾಡಲಾಗುವುದು ಎಂದು ಶಾಸಕ ಲಾಲಾಜಿ ಮೆಂಡನ್ ವಿವರಿಸಿದರು.
ನೂತನ ತಾಲ್ಲೂಕು ಪಂ. ಕಚೇರಿಯೂ ಸುಮಾರು 7ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ನಿರ್ಮಾಣವಾಗಲಿದ್ದು, ಮೆಸ್ಕಾಂ ಕಚೇರಿ ನಿರ್ಮಾಣಕ್ಕೂ ಜಿಲ್ಲಾಧಿಕಾರಿ ಜಮೀನು ಮಂಜೂರಾತಿ ಮಾಡಿದ್ದಾರೆ. ಹಳೆ ಪ್ರವಾಸಿ ಬಂಗ್ಲೆಯನ್ನು ತೆರವು ಮಾಡಿ ಅಭಿವೃದ್ಧಿಗೊಳಿಸುವ ಯೋಜನೆಯೂ ಇದೆ. ಬೆಳಪು ವಿಜ್ಞಾನ ಸಂಶೋಧನಾ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದೆ.
ಕಾಪು ಯೋಜನಾ ಪ್ರಾಧಿಕಾರ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು, ಸದಸ್ಯ ರಮೇಶ್ ಕೆ ಪೂಜಾರಿ ಉಳಿಯಾರಗೋಳಿ, ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ಪರಿವೀಕ್ಷಕ ರವಿಶಂಕರ್, ಗೃಹ ಮಂಡಳಿ ಎಇಇ ಹರೀಶ್, ದೇವಿಪ್ರಸಾದ್ ಕನ್‍ಸ್ಟ್ರಕ್ಷನ್‍ನ ವಾಸುದೇವ ಶೆಟ್ಟಿ, ಯೋಗೀಶ್ ಚಂದ್ರಾದರ್, ಪುರಸಭೆ ಸದಸ್ಯರಾದ ರಮೇಶ್ ಹೆಗ್ಡೆ, ಸುರೇಶ್ ದೇವಾಡಿಗ ಉಪಸ್ಥಿತರಿದ್ದರು.







