ಕೆಎಂಎಫ್ ರೈತರಿಂದ ನೇರವಾಗಿ ಖರೀದಿಸಲು ರೈತ ಸಂಘ ಆಗ್ರಹ

ಬೆಂಗಳೂರು, ಅ.9: ಕರ್ನಾಟಕ ಹಾಲು ಉತ್ಪಾದನ ಮಹಾ ಮಂಡಳಿ(ಕೆಎಂಎಫ್) ದಲ್ಲಾಳಿಗಳ ಮೂಲಕ ಜೋಳವನ್ನು ಖರೀದಿ ಮಾಡುವುದನ್ನು ಕೈಬಿಟ್ಟು ರೈತರಿಂದಲೇ ನೇರವಾಗಿ ಖರೀದಿ ಮಾಡುವಂತಹ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಕೆಎಂಎಫ್ ಪ್ರತಿ ವರ್ಷ 4,500 ಲಕ್ಷ ಟನ್‍ಗಳಷ್ಟು ಮೆಕ್ಕೆ ಜೋಳವನ್ನು ಪಶು ಆಹಾರಕ್ಕೆ ಬಳಕೆ ಮಾಡುತ್ತಿತ್ತು. ಆದರೆ ಈಗ ಕೆಎಂಎಫ್ ದಲ್ಲಾಳಿಯ ಮೂಲಕ ಖರೀದಿ ಮಾಡಲಾಗುತ್ತದೆ. ಇದನ್ನ ಕೈಬಿಟ್ಟು ಕೆಎಂಎಫ್ ನೇರ ಖರೀದಿ ಮಾಡುವ ಮೂಲಕ ಮಾರುಕಟ್ಟೆಯನ್ನ ಉತ್ತೇಜಿಸಲು ಸಹಾಯವಾಗುತ್ತದೆ. ಅಲ್ಲದೆ ರಾಜ್ಯದ ಕುಕ್ಕುಟೋದ್ಯಮ (ಕೋಳಿ ಸಾಗಾಣಿಕೆ) ಇದರ ವಾರ್ಷಿಕ ಬಳಕೆಗೆ ಕನಿಷ್ಠ 1.5 ಲಕ್ಷ ಟನ್ ಅವಶ್ಯಕತೆ ಇರುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ನೇರ ಖರೀದಿ ಮಾಡುವ ಮೂಲಕ ಬೆಲೆ ರಕ್ಷಣೆ ಮಾಡಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಾಮೂಲಿಗಿಂತ ಸುಮಾರು 20% ಅಧಿಕವಾಗಿ ಮುಂಗಾರು ಬೆಳೆ ಕಟಾವಿಗೆ ಬಂದಿದೆ. ಇದರ ಸಂಬಂಧ ಸರಕಾರವು ತನ್ನ ಆವರ್ತ ನಿಧಿಯನ್ನ ಹೆಚ್ಚು ಮಾಡಿಕೊಂಡು ಖರೀದಿ ಕೇಂದ್ರಗಳನ್ನ ತೆರೆಯಬೇಕು. ಮೆಕ್ಕೆ ಜೋಳವನ್ನು ದಲ್ಲಾಳಿಯ ಮೂಲಕ ಖರೀದಿ ಮಾಡುವುದನ್ನು ಕೈಬಿಟ್ಟು ಕೆಎಂಎಫ್ ನೇರ ಖರೀದಿ ಮಾಡಬೇಕು. ಮತ್ತು ಎಂಎಸ್‍ಪಿ (ಕನಿಷ್ಠ ಬೆಂಬಲ ಬೆಲೆಯಲ್ಲಿ) ಖರೀದಿ ಮಾಡಲು ತಕ್ಷಣವೇ ಪ್ರಾರಂಭಿಸಬೇಕು. ಇಲ್ಲದೆ ಹೋದಲ್ಲಿ ಪ್ರತಿಯೊಂದು ಬೆಳೆಗೆ ಒಂದು ಎಕರೆಗೆ 20,000 ರೂಪಾಯಿಗಳನ್ನು ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ವರ್ಷ ಕಟಾವಿಗೆ ಬರುವ ತೊಗರಿ, ಹತ್ತಿ, ಎಣ್ಣೆ ಕಾಳುಗಳು ಮಾರುಕಟ್ಟೆಗೆ ಬರಲಿದೆ. ಇದರ ಜೊತೆಗೆ ಭತ್ತ, ರಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯನ್ನ ಪ್ರವೇಶಿಸುತ್ತದೆ. ಇದನ್ನ ಎಂಎಸ್‍ಪಿ(ಕನಿಷ್ಠ ಬೆಂಬಲ ಬೆಲೆಯಲ್ಲಿ) ಖರೀದಿ ಮಾಡಲು ಕೇಂದ್ರ ಸರಕಾರದ ಸಹಾಯದೊಂದಿಗೆ ತಕ್ಷಣವೇ ಪ್ರಾರಂಭ ಮಾಡಬೇಕು. ಈ ಕುರಿತು ಎರಡು ಬಾರಿ ರಾಜ್ಯ ಸರಕಾರದಕ್ಕೆ ಪತ್ರ ಬರೆದು ಗಮನ ಸೆಳೆಯುವ ಕೆಲಸವನ್ನ ಮಾಡಲಾಗಿದೆ. ಮುಂದೆ ಬರುವ 15 ದಿನಗಳಲ್ಲಿ ಈ ಕೆಲಸವನ್ನು ಸರಕಾರ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.







