ಶೀಘ್ರದಲ್ಲಿಯೇ ಉಪನಗರ ರೈಲು ಯೋಜನೆ ಕಾರ್ಯಗತಗೊಳಿಸಲು ಹೋರಾಟಗಾರರ ಆಗ್ರಹ
ಬೆಂಗಳೂರು, ಅ.9: ಬೆಂಗಳೂರು ಉಪ ನಗರ ರೈಲು ಯೋಜನೆ ಸಂಬಂಧ ಕೇಂದ್ರ ಸಚಿವ ಸಂಪುಟ ಅನುಮೋದಿಸಿದ್ದು, ಶೀಘ್ರದಲ್ಲಿಯೇ ಆದ್ಯತೆಯ ಮೇರೆಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ-ದೇವನಹಳ್ಳಿವರೆಗೆ ಕಾರಿಡಾರನ್ನು ನಿರ್ಮಿಸಬೇಕು ಎಂದು ರೈಲ್ವೆ ಹೋರಾಟಗಾರರು ಆಗ್ರಹಿಸಿದ್ದಾರೆ.
ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು (ಕೆ–ರೈಡ್) ಉಪನಗರ ರೈಲು ಯೋಜನೆ ಅನುಷ್ಠಾನದ ವಿಶೇಷ ಉದ್ದೇಶದ ಘಟಕವನ್ನಾಗಿ (ಎಸ್ಪಿವಿ) ಗೊತ್ತುಪಡಿಸಲಾಗಿದೆ. ಕೇಂದ್ರ ಸರಕಾರ 2020–21ನೇ ಸಾಲಿನ ಬಜೆಟ್‍ನಲ್ಲಿ ಪ್ರಕಟಿಸಿರುವ ಪರಿಷ್ಕೃತ ಯೋಜನೆಯ ಪ್ರಕಾರ ಈ ಯೋಜನೆಯಡಿ ನಾಲ್ಕು ಕಾರಿಡಾರ್ ಗಳನ್ನು ಹೊಸತಾಗಿ ನಿರ್ಮಿಸಲಾಗುತ್ತಿದೆ.
ಕೆಎಸ್ಸಾರ್ಟಿಸಿ ರೈಲು ನಿಲ್ದಾಣ–ಯಶವಂತಪುರ–ದೇವನಹಳ್ಳಿ ಕಾರಿಡಾರ್(41.40 ಕಿ.ಮೀ), ಚಿಕ್ಕಬಾಣಾವರ–ಯಶವಂತಪುರ–ಬೈಯಪ್ಪನಹಳ್ಳಿ ಕಾರಿಡಾರ್(25.01 ಕಿ.ಮೀ), ಕೆಂಗೇರಿ–ಬೈಯಪ್ಪನಹಳ್ಳಿ–ವೈಟ್‍ಫೀಲ್ಡ್ ಕಾರಿಡಾರ್(36.12 ಕಿ.ಮೀ) ಹಾಗೂ ಹೀಲಳಿಗೆ–ಬೈಯಪ್ಪನಹಳ್ಳಿ–ಯಲಹಂಕ–ರಾಜಾನುಕುಂಟೆ ಕಾರಿಡಾರ್(46.24 ಕಿ.ಮೀ). ನಿರ್ಮಾಣವಾಗಲಿವೆ. ಈ ಯೋಜನೆಯ ಅನುಷ್ಠಾನದ ಸಂಪೂರ್ಣ ಉಸ್ತುವಾರಿ ಕೆ- ರೈಡ್ ಸಂಸ್ಥೆಯದಾದರೂ, ಈ ನಾಲ್ಕು ಕಾರಿಡಾರ್ ಗಳಲ್ಲಿ ಯಾವುದನ್ನು ಮೊದಲು ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ರಾಜ್ಯ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
ಮತ್ತೊಂದು ಕಡೆ, ಬಿಎಂಆರ್‍ಸಿಎಲ್ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದೆ. ಈ ಕಾರಣಕ್ಕೆ ಕೆಎಸ್‍ಆರ್-ದೇವನಹಳ್ಳಿ ಬದಲು ಬೇರೆ ಕಾರಿಡಾರ್ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಬಹುದು ಎಂಬ ಆತಂಕ ಹೋರಾಟಗಾರರನ್ನು ಕಾಡುತ್ತಿದೆ ಎನ್ನಲಾಗುತ್ತಿದೆ.
ಕೆಎಸ್‍ಆರ್ ರೈಲು ನಿಲ್ದಾಣ-ದೇವನಹಳ್ಳಿ ಕಾರಿಡಾರ್ ತುರ್ತಾಗಿ ನಿರ್ಮಿಸಬೇಕು. ಮೂರು ವರ್ಷಗಳಲ್ಲಿ ಇದರ ಕಾಮಗಾರಿ ಪೂರ್ಣಗೊಳಿಸಬಹುದು. ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೊ ಕಾರಿಡಾರ್ ಗೆ ಇನ್ನೂ ಕೇಂದ್ರದಿಂದ ಅನುಮೋದನೆ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕರೂ ಅದರ ಅನುಷ್ಠಾನಕ್ಕೆ ಏನಿಲ್ಲವೆಂದರೂ ಆರು ವರ್ಷ ಬೇಕು ಎಂದು ಸಂಘಟನೆಯ ಮುಖಂಡರೊಬ್ಬರು ಹೇಳಿದ್ದಾರೆ.
19 ಸಾವಿರ ಕೋಟಿ ಮೊತ್ತದ ಯೋಜನೆಯ ಕಾಮಗಾರಿ ಶುರು ಮಾಡಲು ಪ್ರಾಥಮಿಕವಾಗಿ ಕನಿಷ್ಠ ಒಂದು ಸಾವಿರ ಕೋಟಿಯಾದರೂ ಬೇಕಿದೆ. ಇಷ್ಟು ಅನುದಾನ ದೊರೆತರೆ ಶೇ 50 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿಯಲಿದೆ. ಅಲ್ಲದೇ ಶೇ 5ರಷ್ಟು ಕಾಮಗಾರಿ ಆರಂಭವೂ ಆಗಲಿದೆ ಎಂದು ಕೆ-ರೈಡ್ ಮೂಲಗಳು ತಿಳಿಸಿವೆ.
ಉಪನಗರ ರೈಲು ಯೋಜನೆ ಬಗ್ಗೆ ರಾಜ್ಯ ಸರಕಾರವೂ ಆಸಕ್ತಿ ವಹಿಸಿ ಕೆಲಸ ಮಾಡಿದೆ. ಈ ಯೋಜನೆ ಶೀಘ್ರವೇ ಅನುಷ್ಠಾನಗೊಳ್ಳಲಿವೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ.
ಪಿ.ಸಿ.ಮೋಹನ್, ಸಂಸದ







