ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ರುದ್ರಂ ಕ್ಷಿಪಣಿ ಪರೀಕ್ಷೆ ಯಶಸ್ವಿ
ಹೊಸದಿಲ್ಲಿ, ಅ.9: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಗೊಳಿಸಿದ ವಿಕಿರಣ ನಿರೋಧಕ ಕ್ಷಿಪಣಿ ರುದ್ರಂನ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶದಲ್ಲೇ ಅಭಿವೃದ್ಧಿಗೊಳಿಸಿದ, ದೇಶದ ಪ್ರಪ್ರಥಮ ವಿಕಿರಣ ನಿರೋಧಕ ಕ್ಷಿಪಣಿ ‘ರುದ್ರಂ’ನ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ. ಕ್ಷಿಪಣಿಯನ್ನು ಒಡಿಶಾದ ಬಾಲಸೋರ್‌ನ ಐಟಿಆರ್‌ನಲ್ಲಿ ಸುಖೋಯ್-30 ಯುದ್ಧವಿಮಾನದಿಂದ ಉಡಾಯಿಸಲಾಗಿದೆ. ಉಡ್ಡಯನದ ಸ್ಥಿತಿಯನ್ನು ಆಧರಿಸಿ ವಿಭಿನ್ನ ವ್ಯಾಪ್ತಿಯ ಗುರಿ ತಲುಪುವ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ.
ರುದ್ರಂ ಕ್ಷಿಪಣಿ ಐಎನ್‌ಎಸ್-ಜಿಪಿಎಸ್ ಮುಂಚಲನಾ ವ್ಯವಸ್ಥೆಯನ್ನು ಹೊಂದಿದ್ದು ಅತ್ಯಂತ ನಿಖರವಾಗಿ ಗುರಿಯನ್ನು ತಲುಪುತ್ತದೆ. ಈ ಕ್ಷಿಪಣಿಯಲ್ಲಿರುವ ‘ಪ್ಯಾಸಿವ್ ಹೋಮಿಂಗ್ ಹೆಡ್’ ವ್ಯವಸ್ಥೆಯು ವ್ಯಾಪಕ ಶ್ರೇಣಿಯ ಆವರ್ತನದ ಮೂಲಕ ಗುರಿಯನ್ನು ಪತ್ತೆಮಾಡುವ, ವರ್ಗೀಕರಿಸುವ ಮತ್ತು ಕೇಂದ್ರೀಕರಿಸುವ ಕಾರ್ಯ ನಿರ್ವಹಿಸುತ್ತದೆ.
ಶತ್ರುಗಳ ಯುದ್ಧವಿಮಾನಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಭಾರತೀಯ ವಾಯುಪಡೆಗೆ ಪ್ರಭು ಅಸ್ತ್ರ ದೊರಕಿದೆ ಎಂದು ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ. ಪರೀಕ್ಷಾರ್ಥ ಪ್ರಯೋಗದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಹೊಸ ಪೀಳಿಗೆಯ ಮತ್ತು ಆಧುನಿಕ ತಂತ್ರಜ್ಞಾನದ ರುದ್ರಂ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದ್ದು ಇದೊಂದು ಅಮೋಘ ಸಾಧನೆಯಾಗಿದೆ” ಎಂದು ಡಿಆರ್‌ಡಿಒವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.







