ಗುಜರಾತ್: ನವರಾತ್ರಿ ಉತ್ಸವದಲ್ಲಿ ಗರ್ಬಾಕ್ಕೆ ನಿಷೇಧ ಹೇರಿದ ಸರಕಾರ

ಅಹ್ಮದಾಬಾದ್, ಅ. 8: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂಬರುವ ಉತ್ಸವದ ಸಂದರ್ಭ ಯಾವುದೇ ‘ಗರ್ಬಾ’ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಗುಜರಾತ್ ಸರಕಾರ ಶುಕ್ರವಾರ ನಿಷೇಧ ವಿಧಿಸಿದೆ.
ರಾಜ್ಯದಲ್ಲಿ ಅಕ್ಟೋಬರ್ 17ರಂದು ಆರಂಭವಾಗಲಿರುವ ನವರಾತ್ರಿ ಉತ್ಸವದ ಸಂದರ್ಭ ಗರ್ಬಾ ಮಾದರಿಯ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿರುವ ಸರಕಾರ, ಹಬ್ಬದ ಕಾಲದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೊರೋನ ಸೋಂಕು ನಿಗ್ರಹಿಸುವ ನಿಟ್ಟಿನಲ್ಲಿ ನಾಗರಿಕರ ಸೂಕ್ತ ನಡವಳಿಕೆಯ ಬಗ್ಗೆ ಒತ್ತು ನೀಡಲು ಬಿಜೆಪಿ ಸರಕಾರ ಎಸ್‌ಒಪಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 9 ದಿನಗಳ ನವರಾತ್ರಿ ಉತ್ಸವದ ಸಂದರ್ಭ ದೊಡ್ಡ, ಮಧ್ಯಮ ಹಾಗೂ ಸಣ್ಣ ಮಟ್ಟದ ಗರ್ಬಾ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲ ಎಂದು ಸರಕಾರ ಹೇಳಿದೆ. ಗರ್ಬಾ ಗುಜರಾತ್‌ನ ಜನಪ್ರಿಯ ಜನಪದ ನೃತ್ಯ ಪ್ರಕಾರ. ನವರಾತ್ರಿ ಉತ್ಸವದ ಸಂದರ್ಭ ಈ ನೃತ್ಯವನ್ನು ಉತ್ಸಾಹದಿಂದ ಪ್ರದರ್ಶಿಸಲಾಗುತ್ತದೆ.
Next Story





