ವೈಎಸ್‌ಆರ್ ಕಾಂಗ್ರೆಸ್‌ನ ಸಂಸದ ರಘು ರಾಮಕೃಷ್ಣ ರಾಜು ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು
826 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣ

ಚೆನ್ನೈ, ಅ. 8: ಪಂಜಾಬ್ ನ್ಯಾಶನಲ್ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ಇಂಡ್-ಭಾರತ್ ಥರ್ಮಲ್ ಪವರ್ ಲಿಮಿಟೆಡ್ ಮೂಲಕ 826 ಕೋಟಿ ರೂಪಾಯಿ ಸಾಲ ವಂಚಿಸಿದ ಆರೋಪಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ರಘು ರಾಮಕೃಷ್ಣ ರಾಜು, ಅವರ ಪತ್ನಿ ಹಾಗೂ ಇತರ 9 ಮಂದಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ರಾಜು ಅವರು ಆಂಧ್ರಪ್ರದೇಶದ ನರಸಪುರಂ ಲೋಕಸಭಾ ಕ್ಷೇತ್ರದ ಸಂಸದ. ಅವರ ಪತ್ನಿ ಕನುಮುರು ರಮಾ ದೇವಿ ಇಂಡ್-ಭಾರತ್ ಥರ್ಮಲ್ ಲಿಮಿಟೆಡ್‌ನ ನಿರ್ದೇಶಕಿ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶದ ಹೈದರಾಬಾದ್, ಪಶ್ಚಿಮ ಗೋದಾವರಿ ಜಿಲ್ಲೆ ಹಾಗೂ ಮುಂಬೈಯ 11 ಸ್ಥಳಗಳಲ್ಲಿ ಗುರುವಾರ ಸಿಬಿಐ ದಾಳಿ ನಡೆಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಬ್ಯಾಂಕ್ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಮೂಲಕ ಪಿಎನ್ ಬಿ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಸಿಬಿಐ ವಕ್ತಾರ ಆರ್.ಕೆ. ಗೌರ್ ತಿಳಿಸಿದ್ದಾರೆ. ರಾಜು ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್‌ನ ತಿಕ್ಕಾಟದ ನಡುವೆ ಈ ದಾಳಿ ನಡೆದಿದೆ. ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ರಾಜು ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ವೈಎಸ್‌ಐರ್ ಕಾಂಗ್ರೆಸ್‌ನಲ್ಲಿ ಜುಲೈಯಲ್ಲಿ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷ ನೀಡಿದ್ದ ಶೋಕಾಸ್ ನೋಟಿಸ್ ಅನ್ನು ಅವರು ಪ್ರಶ್ನಿಸಿದ್ದರು ಹಾಗೂ ಅನಂತರ ಪಕ್ಷದ ನಾಯಕತ್ವವನ್ನು ಪ್ರತಿದಿನ ಟೀಕಿಸುತ್ತಿದ್ದರು.







