ಯುಪಿ ಸರಕಾರ ಅತ್ಯಾಚಾರಿಗಳಿಗೆ ಪ್ರೋತ್ಸಾಹ ನೀಡುವ ಭಾವನೆ ಮೂಡುತ್ತಿದೆ: ಮಾಜಿ ಸಚಿವ ಶರಣಪ್ರಕಾಶ ಪಾಟೀಲ
ಕಲಬುರ್ಗಿ, ಅ.9: ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಜಾತಿ ರಾಜಕಾರಣ ಮಾಡುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಯುಪಿಯಲ್ಲಿ ದಲಿತ ಯುವತಿಯ ದೇಹವನ್ನು ರಾತ್ರೋ ರಾತ್ರಿ ಸುಟ್ಟು ಹಾಕಿ ಅಮಾನವೀಯ ರೀತಿಯಲ್ಲಿ ವರ್ತಿಸಿದೆ. ಈ ಎಲ್ಲ ಘಟನೆಗಳನ್ನು ಗಮನಿಸಿದರೆ ಯುಪಿ ಸರಕಾರ ಅತ್ಯಾಚಾರಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಭಾವನೆ ಜನರಲ್ಲಿ ಮೂಡುತ್ತಿದೆ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಎದುರು ಆಯೋಜಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅತ್ಯಾಚಾರಕ್ಕೆ ಒಳಗಾದ ಯುವತಿಯ ಕುಟುಂಬದವರನ್ನು ಭೇಟಿ ಮಾಡಲು ಹೋಗುವ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದು ಅಮಾನವೀಯವಾಗಿ ವರ್ತಿಸಿದ್ದಾರೆ. ತಂದೆ, ತಾಯಿಗೆ ತಮ್ಮ ಮಗಳ ಮುಖವನ್ನೂ ಕಾಣಿಸದೆ ಸುಟ್ಟು ಹಾಕಿದ್ದಾರೆ. ಹೀಗಾಗಿ, ಈ ಪ್ರಕರಣ ಸಂಬಂಧ ಸಿಎಂ ಯೋಗಿ ಆದಿತ್ಯನಾಥ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಯೋಗಿ ಆದಿತ್ಯನಾಥ ಅವರಿಗೆ ಈ ಘಟನೆಗೆ ಸಂಬಂಧಿಸಿದಂತೆ ಸೂಚನೆ ಕೊಡಬೇಕಿತ್ತು. ಆದರೆ, ಈ ವಿಚಾರದಲ್ಲಿ ಪ್ರಧಾನಿಯೇ ಮೌನ ವಹಿಸಿ, ಯುಪಿ ರಾಜ್ಯ ನಮಗೆ ಸಂಬಂಧಪಟ್ಟಿದ್ದು ಅಲ್ಲಯೆಂಬಂತೆ ಇರುವುದು ನಾಚಿಕೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಗೆ ಬೇಕಾದವರಿಗೆ ಪೊಲೀಸ್ ರಕ್ಷಣೆ ನೀಡುವ ಕೇಂದ್ರ ಸರಕಾರ ಯುಪಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮೃತದಾಳ ಯುವತಿಯ ಕುಟುಂಬಕ್ಕೆ ಇನ್ನುವರೆಗೂ ಯಾವುದೇ ರಕ್ಷಣೆ ನೀಡಿಲ್ಲ. ಬಿಜೆಪಿ ಸರಕಾರದ ಆಡಳಿತದಲ್ಲಿ ಜನರಿಗೆ ರಕ್ಷಣೆ ಇಲ್ಲ ಎಂಬುದನ್ನು ನಾವುಗಳು ಅರಿಯಬೇಕಾಗಿದೆ ಎಂದು ತಿಳಿಸಿದರು.







