ಇಂಗ್ಲೆಂಡ್ ವಿವಿಗಳಲ್ಲಿ 1,800 ವಿದ್ಯಾರ್ಥಿಗಳು, ಸಿಬ್ಬಂದಿಗೆ ಕೊರೋನ ಸೋಂಕು

ಲಂಡನ್, ಅ. 9: ಈಶಾನ್ಯ ಇಂಗ್ಲೆಂಡ್‌ನಾದ್ಯಂತ ಇರುವ ವಿಶ್ವವಿದ್ಯಾನಿಲಯಗಳ 1,800ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ಕಳೆದ ವಾರ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಈಗ ಈ ವಿಶ್ವವಿದ್ಯಾನಿಲಯಗಳಲ್ಲಿ ಕಠಿಣ ಲಾಕ್‌ಡೌನ್ ವಿಧಿಸಲಾಗಿದೆ.
ಕಳೆದ ವಾರ 1,003 ವಿದ್ಯಾರ್ಥಿಗಳು ಮತ್ತು 12 ಸಿಬ್ಬಂದಿಯಲ್ಲಿ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯ ತಿಳಿಸಿದೆ. ನಾರ್ತಂಬ್ರಿಯ ವಿಶ್ವವಿದ್ಯಾನಿಲಯದಲ್ಲಿ 619 ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ಹಾಗೂ ಡರ್ಹಮ್ ವಿಶ್ವವಿದ್ಯಾನಿಲಯದ 219 ವಿದ್ಯಾರ್ಥಿಗಳಲ್ಲಿ ಸೋಂಕು ಪ್ರಕರಣಗಳು ಕಳೆದ ವಾರ ವರದಿಯಾಗಿವೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಹೆಚ್ಚಿನ ವಿಶ್ವವಿದ್ಯಾನಿಲಯಗಳು ಕನಿಷ್ಠ ಮೂರು ವಾರಗಳ ಕಾಲ ಆನ್‌ಲೈನ್ ತರಗತಿಗಳನ್ನು ನಡೆಸಲು ನಿರ್ಧರಿಸಿವೆ.
Next Story





