ಅತ್ಯಾಚಾರಿಗೆ ಪಕ್ಷ ಟಿಕೆಟ್ ನೀಡಿದೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಹಲ್ಲೆ
Photo: Twitter(@ani)
ದಿಯೋರಿಯಾ: ಅತ್ಯಾಚಾರಿಯೊಬ್ಬರನ್ನು ದಿಯೋರಿಯಾ ಕ್ಷೇತ್ರದಿಂದ ಪಕ್ಷ ಕಣಕ್ಕೆ ಇಳಿಸಿದೆ ಎಂದು ಆರೋಪಿಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಮೇಲೆ ಪಕ್ಷದ ಆಂತರಿಕ ಸಭೆಯಲ್ಲಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
"ಒಂದೆಡೆ ನಮ್ಮ ಪಕ್ಷದ ಮುಖಂಡರು ಹತ್ರಸ್ ಮಹಿಳೆಗೆ ನ್ಯಾಯ ಒದಗಿಸಲು ಹೋರಾಟ ನಡೆಸಿದ್ದಾರೆ. ಇನ್ನೊಂದೆಡೆ ಪಕ್ಷ ಒಬ್ಬ ಅತ್ಯಾಚಾರಿಗೆ ಟಿಕೆಟ್ ನೀಡಿದೆ. ಇದು ತಪ್ಪು ನಿರ್ಧಾರ. ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂಥದ್ದು ಎಂದು ತಾರಾದೇವಿ ಯಾದವ್ ಪಕ್ಷದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನು ಪ್ರತಿಭಟಿಸಿ ಕೆಲ ಕಾರ್ಯಕರ್ತರು ತಾರಾದೇವಿಯವರಿಗೆ ಹಲ್ಲೆ ನಡೆಸುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂತಿಮವಾಗಿ ಕೆಲವರು ಮಹಿಳೆಯ ರಕ್ಷಣೆಗೆ ಮುಂದಾದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮೇಂದ್ರ ಸಿಂಗ್, ಉಪಾಧ್ಯಕ್ಷ ಅಜಯ್ ಸಿಂಗ್ ಹಾಗೂ ಇತರ ಇಬ್ಬರ ಮೇಲೆ ತಾರಾದೇವಿ ಪೊಲೀಸರಿಗೆ ದೂರು ನೀಡಿದ್ದಾರೆ. ತಮಗೆ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ಎಸಗಿದ್ದಾಗಿಯೂ ಅವರು ಆಪಾದಿಸಿದ್ದಾರೆ.
ಬಿಜೆಪಿ ಶಾಸಕ ಜನಮೇಜಯ ಸಿಂಗ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಮುಕುಂದ್ ಭಾಸ್ಕರ್ ಎಂಬುವವರನ್ನು ದಿಯೋರಿಯಾ ಕ್ಷೇತ್ರದಿಂದ ಕಣಕ್ಕೆ ಇಳಿಸಿತ್ತು. ಇದನ್ನು ಪ್ರತಿಭಟಿಸಿದ ತಾರಾದೇವಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಚಿನ್ ನಾಯಕ್ ಮೇಲೆ ಹೂಗುಚ್ಛ ಎಸೆದರು ಎಂಬ ದೂರೂ ಕೇಳಿಬಂದಿದೆ. ಈ ಸಂದರ್ಭದಲ್ಲಿ ಸಂಘರ್ಷ ಆರಂಭವಾಗಿ ತಾರಾದೇವಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
Congress' Tara Yadav manhandled by party workers at an event in Deoria.(10.10)
— ANI UP (@ANINewsUP) October 11, 2020
She says,“I was thrashed by party workers when I questioned party's decision to give a ticket to a rapist, Mukund Bhaskar for upcoming by-polls. Now, I'm waiting for Priyanka Gandhi ji to take action” pic.twitter.com/MYYp8k1GLX