ದೇಶದಲ್ಲಿ ಸಂಸ್ಕೃತಿ, ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ: ಪ್ರಶಾಂತ್ ಭೂಷಣ್

ಬೆಂಗಳೂರು, ಅ. 11: ದೇಶದ ಪರಿಸರ, ಸಮಾಜ, ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ದೊಡ್ಡ ಗಂಡಾಂತರ ಬಂದಿದೆ. ಅವುಗಳು ಉಳಿಯದಿದ್ದರೆ ಮನುಕುಲವೂ ಉಳಿಯುವುದಿಲ್ಲ. ಇದರ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಯೋಚನೆ ಮಾಡಬೇಕು ಎಂದು ಸುಪ್ರೀಂಕೋರ್ಟಿನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಜನಾಂದೋಲಗಳ ಮಹಾಮೈತ್ರಿ ವೇದಿಕೆ ವತಿಯಿಂದ ಆನ್‍ಲೈನ್‍ನಲ್ಲಿ ಆಯೋಜಿಸಿದ್ದ ಸಮುದಾಯದ ಕಡೆಗೆ ಜನಾಂದೋಲನಗಳ ಮಹಾಮೈತ್ರಿ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶದ ಪ್ರಸ್ತುತ ದುಸ್ಥಿತಿ ಮತ್ತು ಪ್ರಜಾತಂತ್ರದ ಮರು ಸ್ಥಾಪನೆ ವಿಷಯದ ಕುರಿತು ಮಾತನಾಡಿದರು.
ಇಂದು ದೇಶವನ್ನಾಳುತ್ತಿರುವವರು ಇಡೀ ದೇಶವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಅದರ ಭಾಗವಾಗಿಯೇ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ದಲಿತ, ಅಲ್ಪಸಂಖ್ಯಾತರು, ಬಡವರು, ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ಜನರ ವಾಕ್ ಸ್ವಾತಂತ್ರ್ಯವನ್ನೇ ಕಸಿಯಲು ಮುಂದಾಗಿದ್ದಾರೆ ಎಂದು ದೂರಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಮುಖ್ಯ ಕೆಲಸ ನಿರ್ವಹಿಸುವ ಮಾಧ್ಯಮಗಳನ್ನೇ ಕೇಂದ್ರ ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಯಾವ ಮಾಧ್ಯಮ ಸಂಸ್ಥೆಗಳು ಕೇಂದ್ರದ ಅಣತಿಯಂತೆ ಕೆಲಸ ನಿರ್ವಹಿಸುವುದಿಲ್ಲವೋ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ರೀತಿಯ ತಂತ್ರಗಳನ್ನು ಬಳಸಿಕೊಂಡು ಮಾಧ್ಯಮಗಳ ಮೂಲಕ ಸಮಾಜದಲ್ಲಿ ಸುಳ್ಳು ಬಿತ್ತಲಾಗುತ್ತಿದೆ ಎಂದು ತಿಳಿಸಿದರು.
ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದ ಕೇಂದ್ರ ಚುನಾವಣಾ ಆಯೋಗವು ಪಕ್ಷಪಾತಿಯಾಗಿದೆ. ಸುಪ್ರೀಂಕೋರ್ಟಿನ ನ್ಯಾಯಾಧೀಶರ ಕೊಲಿಜಿಯಂ ಮೂಲಕ ನ್ಯಾಯಮೂರ್ತಿಗಳನ್ನು ನೇಮಿಸುವುದರ ಬದಲು ಹೊಸ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆದಿದೆ. ಅತಿ ದೊಡ್ಡ ಹೋರಾಟದ ನಂತರವೂ ಲೋಕಪಾಲರನ್ನು ಸರಕಾರ ನೇಮಕ ಮಾಡಿಲ್ಲ. ಕೇಂದ್ರ ವಿಚಕ್ಷಣಾ ದಳಕ್ಕೆ ಭ್ರಷ್ಟರನ್ನು ನೇಮಕ ಮಾಡಿ, ಅದನ್ನು ಕುಲಗೆಡಿಸಿದೆ. ಕೇಂದ್ರ ಮಾನವ ಹಕ್ಕುಗಳ ಆಯೋಗವನ್ನು ಇದೇ ರೀತಿ ಹಾಳು ಮಾಡಿದೆ ಎಂದು ಆರೋಪಿಸಿದರು.
ದೇಶದಾದ್ಯಂತ ಕೊರೋನ ಮಹಾಮಾರಿ ತಲೆದೋರಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಬೇಕಾದ ಸರಕಾರವು ಗೋ ಕರೋನ ಗೋ ಹೇಳಿ, ಜಾಗಟೆ, ಗಂಟೆ ಬಾರಿಸಲು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಜನರ ಧಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಭೂಷಣ್ ದೂರಿದರು.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದ್ದು, ಕೇಂದ್ರದ ಅನುಮತಿಯಿಲ್ಲದೇ ಯಾವುದೇ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸುವಂತಿಲ್ಲ. ಈಗ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಜೆಎನ್ಯೂ, ದಿಲ್ಲಿ ಕೇಂದ್ರೀಯ ವಿವಿ, ಅಲಿಘರ್ ವಿವಿ ಸೇರಿದಂತೆ ಪ್ರಜಾಪ್ರಭುತ್ವ, ಸಮಾನತೆ ಬಗ್ಗೆ ಮಾತನಾಡುವ ವಿವಿಗಳ ಮೇಲೆ ಕೇಂದ್ರದ ಕಣ್ಣು ಬಿದ್ದಿದ್ದು, ಅದನ್ನು ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿ.ಎಸ್.ನಾಗಭೂಷಣ್, ಎಸ್.ಆರ್.ಹೀರೇಮಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







