ತುಂಗಭದ್ರಾ ಜಲಾಶಯದಿಂದ 52 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಸೇತುವೆ, ಸ್ಮಾರಕ ಜಲಾವೃತ

ಸಾಂದರ್ಭಿಕ ಚಿತ್ರ
ಬಳ್ಳಾರಿ, ಅ.11: ರಾಜ್ಯದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಈ ಕಾರಣದಿಂದ 52 ಸಾವಿರ ಕ್ಯೂಸೆಕ್ ನೀರನ್ನು ರವಿವಾರ ನದಿಗೆ ಹರಿಸಲಾಗಿದ್ದು, ನದಿ ತೀರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ಜಲಾಶಯದ ಒಳ ಹರಿವು ಹೆಚ್ಚಿರುವ ಕಾರಣ ನದಿಗೆ ನೀರನ್ನು ಹರಿಸಲಾಗಿದೆ. 12 ಗೇಟ್ಗಳನ್ನು 2 ಅಡಿ ತೆರೆಯಲಾಗಿದ್ದರೆ, 4 ಗೇಟ್ಗಳನ್ನು 1 ಅಡಿ ತೆರೆದು ಒಟ್ಟು 16 ಗೇಟ್ಗಳ ಮೂಲಕ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಇದ್ದು, ನೀರಿನ ಸಂಗ್ರಹ ಸಾಮರ್ಥ್ಯ 100.855 ಟಿಎಂಸಿ ನೀರು ಸಂಗ್ರಹ ಇದೆ. ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಪರಿಣಾಮ ಹಂಪಿಯ ಪುರಂದರ ಮಂಟಪ, ವಿಧಿ ವಿಧಾನ ಮಂಟಪ ಸೇರಿ ಹಲವು ಸ್ಮಾರಕಗಳು ಮತ್ತೆ ಜಲಾವೃತವಾಗಿದ್ದು, ಕಂಪ್ಲಿ-ಗಂಗಾವತಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗುವ ಸಾಧ್ಯತೆ ಇದೆ.
ಶನಿವಾರದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳವಾರದವರೆಗೂ ವರ್ಷಧಾರೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಕಾರಣದಿಂದ ನದಿಗೆ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುವ ಸಾಧ್ಯತೆ ಇರುವುದರಿಂದ ನದಿಗೆ ನೀರನ್ನು ಹರಿಸಲಾಗಿದೆ.





