ಒಂದು ದೇಶ ಒಂದು ಕಾನೂನು ದೇಶಕ್ಕೆ ಅಪಾಯಕಾರಿ: ವೈಎಸ್‍ವಿ ದತ್ತಾ

ಬೆಂಗಳೂರು, ಅ. 11: ಒಂದು ದೇಶ ಒಂದು ಕಾನೂನು, ಒಂದು ದೇಶ ಒಂದು ರೇಷನ್‍ಕಾರ್ಡ್ ಸೇರಿದಂತೆ ಎಲ್ಲವನ್ನು ಒಂದೇ ಆಗಿ ಮಾಡುತ್ತಿರುವುದು ದೇಶಕ್ಕೆ ಅಪಾಯಕಾರಿಯೆಂದು ಜೆಡಿಎಸ್ ಹಿರಿಯ ಮುಖಂಡ ವೈಎಸ್‍ವಿ ದತ್ತಾ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ಸಮಾಜವಾದಿ ಜಯಪ್ರಕಾಶ್ ನಾರಾಯಣ್‍ರವರ 118ನೆ ಜಯಂತಿಯ ಹಿನ್ನೆಲೆಯಲ್ಲಿ ನಗರದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯ ಒಂದು ದೇಶ ಒಂದು ಕಾನೂನು ಘೋಷಣೆಯ ಹಿಂದೆ ಅಪಾಯಕಾರಿ ಸಿದ್ಧಾಂತ ಅಡಗಿದೆ ಎಂದು ತಿಳಿಸಿದ್ದಾರೆ.
ಜಯಪ್ರಕಾಶ್ ನಾರಾಯಣ್(ಜೆಪಿ)ಗೆ ಪ್ರಧಾನಿ ಹುದ್ದೆ ಮನೆ ಬಾಗಿಲಿಗೆ ಬಂದಿತ್ತು. ಅದೃಷ್ಟ ಅವರ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಾಗಲೂ ಅವರು ಪ್ರಧಾನಿ ಹುದ್ದೆ ನಿರಾಕರಿಸಿದರು. ಆದರೆ, ಇಂದಿನ ದಿನಗಳಲ್ಲಿ ಟಿಕೆಟ್ ಸಿಗದಿದ್ದರೆ ಪಕ್ಷ ಬಿಡುತ್ತಾರೆ ಎಂದು ಅವರು ವಿಷಾದಿಸಿದ್ದಾರೆ.
ಇಂದಿರಾಗಾಂದಿಯ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಎಲ್ಲ ಕಾನೂನುಗಳು, ವಿಚಾರಗಳು ಬಹಿರಂಗವಾಗುತ್ತಿತ್ತು. ಆದರೆ, ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಅಂತರಂಗದಲ್ಲಿಯೇ ಎಲ್ಲವನ್ನೂ ಮಾಡಲಾಗುತ್ತಿದೆ ಅವರು ಟೀಕಿಸಿದರು.







