ಬಿಎಸ್ವೈ ಕುಟುಂಬದ ವಿರುದ್ಧ 662 ಕೋಟಿ ರೂ. ಭ್ರಷ್ಟಾಚಾರ ಆರೋಪ: ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

ಅಭಿಷೇಕ್ ಮನುಸಿಂಘ್ವಿ- ಯಡಿಯೂರಪ್ಪ
ಬೆಂಗಳೂರು, ಅ. 11: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನುಸಿಂಘ್ವಿ ಆಗ್ರಹಿಸಿದ್ದಾರೆ.
ಹೊಸದಿಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ತಿನ್ನುವುದಿಲ್ಲ, ಇತರರಿಗೆ ತಿನ್ನಲೂ ಬಿಡುವುದಿಲ್ಲ' ಎಂದು ಹೇಳುತ್ತಿದ್ದ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪನವರ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದೇಕೆ? ಅಥವಾ ಬಿಎಸ್ ವೈ ಅವರ ಭ್ರಷ್ಟಾಚಾರ ಮೋದಿ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಗೊತ್ತಿದ್ದರೂ ಸುಮ್ಮನೆ ಇದ್ದಾರೆಯೇ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ, ಮೊಮ್ಮಗ ಹಾಗೂ ಅಳಿಯನ ವಿರುದ್ಧ 662 ಕೋಟಿ ರೂಪಾಯಿ ಮೊತ್ತದ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಆದರೂ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಈ ಕುರಿತು ಸುಪ್ರೀಂ ಅಥವಾ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಅಭಿಷೇಕ್ ಮನುಸಿಂಘ್ವಿ ಆಗ್ರಹಿಸಿದರು.
ಪ್ರಧಾನಿ ಮೋದಿ ನಾನು ಚೌಕಿದಾರ್ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರು ಬೇರೆಯವರ ಮನೆ ಕಾಯುತ್ತಿದ್ದಾರೆ. ತಮ್ಮ ಮನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಅವರಿಗೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ ಅಭಿಷೇಕ್ ಮನುಸಿಂಘ್ವಿ, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರ ಭ್ರಷ್ಟಾಚಾರ ನೋಡಿಕೊಂಡು ಯಾಕೆ ಸುಮ್ಮನೆ ಕೂತಿದ್ದಾರೆ ಎಂದು ಕೇಳಿದರು.
ಮುಖ್ಯಮಂತ್ರಿಯ ವಿರುದ್ಧ ಇಷ್ಟು ದೊಡ್ಡ ಆರೋಪ ಕೇಳಿಬಂದರೂ ಅವರನ್ನು ಇನ್ನು ಏಕೆ ಸಿಎಂ ಹುದ್ದೆಯಿಂದ ಕೆಳಗೆ ಇಳಿಸಿಲ್ಲ. ಈ ಕುರಿತು ಇನ್ನೂ ಏಕೆ ಎಫ್ಐಆರ್ ದಾಖಲಿಸಿಲ್ಲ. ನೇರವಾಗಿ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ದಾಖಲೆಗಳಿದ್ದರೂ, ಭ್ರಷ್ಟಾಚಾರ ಆರೋಪ ಹೊತ್ತವರಿಗೆ ದೊಡ್ಡ ಹುದ್ದೆ ನೀಡಲಾಗಿದೆ ಎಂದು ದೂರಿದ ಅವರು, ಬಿಎಸ್ವೈ ಅವರನ್ನು ಈ ಕೂಡಲೇ ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಆಗ್ರಹಿಸಿದರು.
ದೊಡ್ಡ ಮೊತ್ತದ ಲಂಚದ ಹಣ ಸಂದಾಯ ಆಗಿದೆ ಎಂಬ ಕುರಿತು ಯಡಿಯೂರಪ್ಪ ಅವರು ಮೊಮ್ಮಗ ತಮ್ಮ ಸಂಭಾಷಣೆಯಲ್ಲಿ ಮಾತನಾಡಿರುವುದು ದಾಖಲಾಗಿದೆ. ಈ ಬಗ್ಗೆ ಎರಡು ತಿಂಗಳ ಅವಧಿಯಲ್ಲಿ ತನಿಖೆಯಾಗಬೇಕು. ಹಾಲಿ ಮುಖ್ಯ ನ್ಯಾಯಧೀಶರಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದ ಅಭಿಷೇಕ್ ಮನುಸಿಂಘ್ವಿ, ಭ್ರಷ್ಟಾಚಾರ, ದೊಡ್ಡ ಮೊತ್ತದ ಹಣ ವರ್ಗಾವಣೆ ವ್ಯವಹಾರದ ಬಗ್ಗೆ ಕೇಸು ದಾಖಲಿಸಿ, ತನಿಖೆ ನಡೆಸಬೇಕು ಎಂದು ಕೋರಿದರು.







