ವಿದ್ಯಾಗಮದ ಸಂದರ್ಭದಲ್ಲಿ ಸಾವನ್ನಪ್ಪಿದ ಶಿಕ್ಷಕರ ಕುಟುಂಬಕ್ಕೆ ಪರಿಹಾರಕ್ಕೆ ಒತ್ತಾಯ
ಬೆಂಗಳೂರು, ಅ. 11: ವಿದ್ಯಾಗಮದ ಸಂದರ್ಭದಲ್ಲಿ ರಾಜ್ಯದಲ್ಲಿ ಸಾವನ್ನಪ್ಪಿದ ಎಲ್ಲಾ ಶಿಕ್ಷಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಹಾಗೂ ಸೋಂಕಿತ ಶಿಕ್ಷಕರ ವೈದ್ಯಕೀಯ ವೆಚ್ಚ ಸರಕಾರವೇ ಭರಿಸಬೇಕೆಂದು ಶಿಕ್ಷಣ ಉಳಿಸಿ ಸಮಿತಿ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯು, ವಿದ್ಯಾಗಮ ಕಾರ್ಯಕ್ರಮದ ನಂತರ ರಾಜ್ಯದಲ್ಲಿ ಹಲವು ಶಿಕ್ಷಕರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಇವರ ಕುಟುಂಬಕ್ಕೆ ಪರಿಹಾರ ಕೂಡಲೇ ಬಿಡುಗಡೆ ಮಾಡಬೆಕು. ಹಾಗೂ ಸೋಂಕಿತ ಶಿಕ್ಷಕರಿಗೆ ಆರೋಗ್ಯ ವೆಚ್ಚ ಹಾಗೂ ಸಂಪೂರ್ಣ ಗುಣಮೂಖರಾಗುವವರೆಗೂ ಸಂಬಳ ಸಹಿತ ರಜೆ ನೀಡಬೇಕೆಂದು ತಿಳಿಸಿದೆ.
ಎಲ್ಲಾ ಅತಿಥಿ ಶಿಕ್ಷಕರು, ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸಿ ಅವರೆಲ್ಲರಿಗೂ ಸರಕಾರ ಜೂನ್‍ನಿಂದ ಶಾಲಾ ಕಾಲೇಜುಗಳೂ ಆರಂಭವಾಗುವವರೆಗೂ ಸಂಬಳವನ್ನು ನೀಡಬೇಕು. ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಉಪನ್ಯಾಸಕರುಗಳಿಗೂ ಜೂನ್‍ನಿಂದ ಶಾಲಾ ಕಾಲೇಜುಗಳು ಆರಂಭವಾಗುವವರೆಗೂ ಸಂಬಳವನ್ನು ನೀಡುವಂತೆ ಖಾಸಗಿ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಬೇಕು. ಮತ್ತು ಇದನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಒತ್ತಾಯಿಸಿದೆ.
ಮಾರ್ಚ್‍ನಿಂದ ಮೇ ವರೆಗಿನ ಲಾಕ್ ಡೌನ್ ಸಂದರ್ಭದ ವಿಶೇಷ ಆರ್ಥಿಕ ಪ್ಯಾಕೇಜ್‍ನ್ನು ಎಲ್ಲಾ ಅತಿಥಿ ಶಿಕ್ಷಕರು, ಉಪನ್ಯಾಸಕರು, ಖಾಸಗಿ ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ವಿಸ್ತರಿಸಿ ಕೂಡಲೇ ಹಣ ಬಿಡುಗಡೆ ಮಾಡಬೇಕು. ಕರೋನಾ ಮಹಾಮಾರಿ ಕಡಿಮೆಯಾಗುವವರೆಗೂ ಶಾಲಾ-ಕಾಲೇಜುಗಳನ್ನು ಆರಂಭಿಸಬಾರದೆಂದು ಶಿಕ್ಷಣ ಉಳಿಸಿ ಸಮಿತಿಯ ಪರವಾಗಿ ರಾಜೇಶ್ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







