ಕೊರೋನ ನಿಯಂತ್ರಣ, ಸಾವಿನ ಪ್ರಮಾಣ ಇಳಿಸುವುದು ಮೊದಲ ಆದ್ಯತೆ: ಡಾ.ಕೆ.ಸುಧಾಕರ್

ಬೆಂಗಳೂರು, ಅ.12: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮೇಲೆ ಭರವಸೆ ಇಟ್ಟು ಆರೋಗ್ಯ ಖಾತೆ ನೀಡಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸೋಮವಾರ ನಗರದ ಆದಿ ಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಖ್ಯಮಂತ್ರಿ ನನ್ನ ಮೇಲೆ ಭರವಸೆ ಇಟ್ಟು, ಕೊರೋನ ನಿಯಂತ್ರಿಸಿ ರಾಜ್ಯದ ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ನೀಡಿದ್ದಾರೆ. ಅದಕ್ಕೆ ಚ್ಯುತಿ ಆಗದಂತೆ ಕರ್ತವ್ಯ ನಿಭಾಯಿಸುವೆ ಎಂದು ಅವರು ಹೇಳಿದರು.
ತಾಂತ್ರಿಕವಾಗಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಒಂದೇ ಆಗಿರಬೇಕು. ದೇಶದಲ್ಲಿ ಕೇಂದ್ರದ ಮಟ್ಟದಲ್ಲಿ ಹಾಗೂ ಬೇರೆ ರಾಜ್ಯಗಳಲ್ಲಿ ಒಂದೇ ವ್ಯವಸ್ಥೆ ಇದೆ. ಆಡಳಿತದ ದೃಷ್ಟಿಯಿಂದ ಮತ್ತು ತಾಂತ್ರಿಕವಾಗಿ ಬೇರೆ ಬೇರೆಯಾಗಿರುವುದು ಸರಿಯಲ್ಲ. ಇದರಿಂದಾಗಿ ಜವಾಬ್ದಾರಿ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು ಎಂದು ಅವರು ವಿವರಿಸಿದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ವೈದ್ಯಕೀಯ ಕಾಲೇಜಿನ ನಿರ್ದೇಶಕರು ಇರುತ್ತಾರೆ. ಇಬ್ಬರೂ ಬೇರೆ ಸಚಿವರಿಗೆ ವರದಿ ಮಾಡುತ್ತಾರೆ. ಇದು ಸ್ಥಳೀಯವಾಗಿ ಸಮರ್ಪಕವಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಮುಖ್ಯಮಂತ್ರಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸುಧಾಕರ್ ಹೇಳಿದರು.
ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಅವರು ಶೋಷಿತ ವರ್ಗದ ಜನರಿಗೆ ನ್ಯಾಯ ನೀಡುವ ಮಹತ್ವದ ಖಾತೆಯನ್ನು ಪಡೆದಿದ್ದಾರೆ. ಅವರು ಬಹಳ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾರೆ ಎಂದು ಸುಧಾಕರ್ ಹೇಳಿದರು.
ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಇಲಾಖೆಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸದನದಲ್ಲಿಯೇ ಹೇಳಿದ್ದೆ. ಆದರೂ, ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಶೀಲಿಸುತ್ತೇನೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಒಂದು ಸವಾಲಿನ ಇಲಾಖೆ. ಕೋವಿಡ್ ಸಂದರ್ಭದಲ್ಲಿ ಸವಾಲು ಮತ್ತಷ್ಟು ಹೆಚ್ಚಿದೆ. ಕೋವಿಡ್ ನಿಯಂತ್ರಿಸುವುದರ ಜೊತೆಗೆ ಬೇರೆ ರೋಗಗಳನ್ನು ನಿಯಂತ್ರಿಸುವುದು ಮತ್ತು ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಕೋವಿಡ್ ಸಾವಿನ ಪ್ರಮಾಣ ಶೇ.1ಕ್ಕೂ ಕಡಿಮೆ ಇರಬೇಕು. ಸೋಂಕು ತಗಲಿದವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಮೊದಲ 48 ಗಂಟೆಗಳೊಳಗೆ ಪತ್ತೆ ಮಾಡಬೇಕು. ನಂತರ ಅವರಿಗೆ ಪರೀಕ್ಷೆ ಮಾಡಬೇಕು. ಅಗತ್ಯವಿರುವವರಿಗೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕರೆ ಸಾವಿನ ಪ್ರಮಾಣ ಇಳಿಕೆ ಗುರಿ ಮುಟ್ಟಲು ಸಾಧ್ಯ ಎಂದು ಸುಧಾಕರ್ ವಿವರಿಸಿದರು.
ಮೈಸೂರಿನಲ್ಲಿ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಲು ಮತ್ತು ಕೊರೋನ ಹರಡದಂತೆ ಕ್ರಮ ಕೈಗೊಳ್ಳಲು ಚರ್ಚೆಯಾಗಿದೆ. ಶೇ.80 ರಿಂದ 90 ರಷ್ಟು ಕೊರೋನ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಮೈಸೂರಿನಲ್ಲಿ ಏಕೆ ಹೆಚ್ಚು ಕೊರೋನ ಸಾವುಗಳಾಗುತ್ತಿದೆ ಎಂಬುದು ಡೆತ್ ಆಡಿಟ್ ವರದಿಯಿಂದ ತಿಳಿದುಬರಲಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಉತ್ತಮವಾದ ಸಾರ್ವಜನಿಕ ಆರೋಗ್ಯ ಸೇವೆ ಲಭ್ಯವಿದೆ. ಕರ್ನಾಟಕದಲ್ಲೂ ಆರೋಗ್ಯ ಸೇವೆ ಮಾದರಿಯಂತಾಗಬೇಕು ಎಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದೇನೆ. ನಾಡಿನ ಜನರು ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದಾರೆ. ಆ ನಂಬಿಕೆ ಉಳಿಸುತ್ತೇನೆ ಎಂದು ಸುಧಾಕರ್ ಹೇಳಿದರು.







