ರಸವೇ ಕಾವ್ಯದ ನಿಜವಾದ ಸೌಂದರ್ಯ : ಪಾದೇಕಲ್ಲು ವಿಷ್ಣು ಭಟ್ಟ

ಉಡುಪಿ, ಅ.12: ‘ಅನುಭವ ಮತ್ತು ಅಭಿವ್ಯಕ್ತಿಯ ಕುರಿತು ಕಾವ್ಯ ಮೀಮಾಂಸಕಾರರು ಸೊಗಸಾಗಿ ನಿರೂಪಿಸಿದ್ದಾರೆ. ಕಾವ್ಯದ ಸೌಂದರ್ಯ ವನ್ನು ಆಸ್ವಾದಿಸಬೇಕಾದರೆ ಆ ಪದ್ಯಗಳ ಅನ್ವಯಕ್ರಮ ಹಾಗೂ ಪದವಿಂಗಡಣೆಗಳ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ’ ಎಂದು ಭಾಷಾ ವಿದ್ವಾಂಸ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಪಾದೇಕಲ್ಲು ವಿಷ್ಣುಭಟ್ಟ ಹೇಳಿದ್ದಾರೆ.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾದ ವಿಚಾರ ಸಂಗೋಷ್ಠಿಯಲ್ಲಿ ಅವರು ’ಹಳಗನ್ನಡ ಕಾವ್ಯ ಸೌಂದರ್ಯ’ ಎಂಬ ವಿಷಯದ ಕುರಿತು ವಿದ್ವತ್ಪೂರ್ಣವಾದ ವಿಚಾರ ುಂಡನೆ ಮಾಡಿ ಮಾತನಾಡುತಿದ್ದರು.
‘ಕಾವ್ಯದ ನಿಜವಾದ ಸೌಂದರ್ಯವನ್ನು ಅರಿತುಕೊಳ್ಳುವುದಕ್ಕಾಗಿ ಶುದ್ಧವಾದ ಮನಸ್ಸಿನಿಂದ, ನಿರ್ಮಲವಾದ ದೃಷ್ಠಿಯಿಂದ ಅಧ್ಯಯನ ಹಾಗೂ ಅಭ್ಯಾಸ ಮಾಡಬೇಕಾಗುತ್ತದೆ. ವಿನಯಶೀಲತೆ ಜೊತೆಗೆ ವ್ಯಾಕರಣದ ಅರಿವು ಇದ್ದಲ್ಲಿ ಕಾವ್ಯದ ರಸಾಸ್ವಾದನೆ ಸುಲಭಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು. ಹಳಗನ್ನಡ ಕವಿಗಳ ಕಾವ್ಯವನ್ನು ಉದಾಹರಿಸುವ ಜೊತೆಗೆ ಕಾಲಾಂತರದ ಬದಲಾವಣೆಗಳ ಕಡೆಗೂ ಅವರು ಗಮನ ಸೆಳೆದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್. ಪಿ., ’ಇದೊಂದು ಹೊಸ ಅವಕಾಶ. ಕೊರೋನ ಸಂಕಷ್ಟದ ಸಂದರ್ಭದಲ್ಲಿ ನಮಗೆ ಈ ಮಾಧ್ಯಮದ ಮೂಲಕ ಅತಿ ಹೆಚ್ಚು ಜನರನ್ನು ತಲುಪುವಂತಾದದ್ದು ಒಂದು ಒಳ್ಳೆಯ ಬೆಳವಣಿಗೆ. ಇಂಥ ಕಾರ್ಯಕ್ರಮಗಳ ಸಂಖ್ಯೆ ಹೆಚಾ್ಚಗಲಿ’ ಎಂದು ಶುಭ ಹಾರೈಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ರಾಜ್ಯ ಕಾರ್ಯದರ್ಶಿ ಡಾ. ಮಾಧವ ಮೂಡು ಕೊಣಜೆ, ವಿಭಾಗ ಸಂಯೋಜಕ ಶೈಲೇಶ್ ಹಾಗೂ ಕರ್ನಾಟಕದ ವಿವಿದೆಡೆಗಳ ಹಿರಿಯ ಕಿರಿಯ ಭಾಷಾ ಪಂಡಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ಸಮಿತಿಯ ಕೋಶಾಧಿಕಾರಿ ಡಾ.ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.







