ಬೀದಿ ಬದಿ ಮೀನು ಮಾರಾಟ ನಿಷೇಧಕ್ಕೆ ವಿರೋಧ: ಎಡಿಸಿಗೆ ಮನವಿ

ಉಡುಪಿ, ಅ.12: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ಹಾಗೂ ಮನೆ ಮನೆ ಮೀನು ಮಾರಾಟ ಮಾಡುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ ಉಡುಪಿ ಜಿಲ್ಲೆ ಹಾಗೂ ಸಿಪಿಐಎಂ ಉಡುಪಿ ತಾಲೂಕು ಸಮಿತಿಯ ನಿಯೋಗವು ಇಂದು ಉಡುಪಿ ನಗರಸಭೆ ಪೌರಾಯುಕ್ತ ಹಾಗೂ ಅರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಸಾಂಕ್ರಾಮಿಕ ಕಾಯಿಲೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನ ಮೀನು ಮಾರುಕಟ್ಟೆಗಳಲ್ಲಿ ಸೇರಲು ಆಗುವುದಿಲ್ಲ. ಬೀದಿಬದಿ ವ್ಯಾಪಾರಸ್ಥರು ಬಹುತೇಕ ಬಡ ಮಹಿಳೆಯರು ಆಗಿದ್ದಾರೆ. ಅದೇ ರೀತಿ ಮನೆ ಮನೆಗೆ ದ್ವಿಚಕ್ರ ವಾಹನದ ಮೂಲಕ ಮೀನು ಮಾರಾಟ ಮಾಡುತ್ತಿರುವವರಿಗೆ ಯಾವುದೇ ಆತಂಕ ಇಲ್ಲದೆ ಮೀನು ಮಾರಾಟ ಮಾಡಲು ಅವಕಾಶ ನೀಡಲು ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ನಿಯೋಗವು ಮಣಿಪಾಲ, ಪೆರಂಪಳ್ಳಿ, ಕಿನ್ನಿಮುಲ್ಕಿ ಹಾಗೂ ಕೆಲವು ಪ್ರಮುಖ ಪ್ರದೇಶದಲ್ಲಿ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣದ ಸ್ಥಳ ಗುರುತಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆ ನಡೆಸಿತು. ಈ ಸಂದರ್ಭದಲ್ಲಿ ಮೀನುಗಾರರ ಸಂಘದ ಅಧ್ಯಕ್ಷ ಕೆ.ಶಂಕರ್, ಕಾರ್ಯದರ್ಶಿ ಕವಿರಾಜ್ ಎಸ್., ಸಿಪಿಐಎಂ ಕಾರ್ಯದರ್ಶಿ ಶಶಿಧರ್ ಗೊಲ್ಲ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಐಎಡಬ್ಲ್ಯೂಯು ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು.







