ಕೃಷಿ ಹಾನಿಗೆ ಸರಕಾರ ಶೀಘ್ರ ನೆರೆ ಪರಿಹಾರ ನೀಡಲಿ: ಕೃಷಿಕ ಸಂಘ
ಉಡುಪಿ, ಅ.12: ರೈತರ ಏಳಿಗೆಗಾಗಿ ಸರಕಾರಗಳು ಹಲವಾರು ಯೋಜನೆಗಳು, ಸವಲತ್ತುಗಳನ್ನು ರೂಪಿಸಿ ಜಾರಿಗೆ ತರುತ್ತವೆ. ಆದರೆ ಸರಕಾರ ಜಾರಿಗೆ ತರುತ್ತಿರುವ ಬಹಳಷ್ಟು ಯೋಜನೆಗಳು, ಸಕಾಲದಲ್ಲಿ ತಲುಪದಿದ್ದರೆ ಅದರಿಂದ ರೈತರಿಗೆ ಉಪಕಾರ, ಪ್ರಯೋಜನ ವಾಗುವುದಿಲ್ಲ. ಬದಲಾಗಿ ಇದು ಕೃಷಿಕರಿಗೆ ಹಾಗೂ ದೇಶದ ಆಹಾರ ಉತ್ಪನ್ನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಸೆಪ್ಟಂಬರ್ ಕೊನೆಯಲ್ಲಿ ಸುರಿದ ವಿಪರೀತ ಮಳೆಯಿಂದ ಉಂಟಾದ ನೆರೆ ಹಾವಳಿ ಜಿಲ್ಲೆಯಲ್ಲಿ ಭತ್ತ ಕೃಷಿ ಸಂಪೂರ್ಣ ನೆಲೆಕಚ್ಚುವಂತೆ ಮಾಡಿದೆ. ತೆನೆ ತುಂಬಿಕೊಳ್ಳುತ್ತಿರುವ ಹೊತ್ತಲ್ಲೆ ಬಂದ ನೆರೆಯಿಂದ ಭತ್ತ ಸತ್ವ ಕಳೆದುಕೊಂಡು ಜೊಳ್ಳು ಮಾತ್ರ ಉಳಿದು ಕೃಷಿಕರಿಗೆ ಅಪಾರ ನಷ್ಟವಾಗಿದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿರುವ ಸೂಚನೆಗಳಿಲ್ಲ ಎಂದು ಅದು ಹೇಳಿದೆ.
ಆದ್ದರಿಂದ ನೆರೆ ಹಾವಳಿಯಿಂದ ಕೃಷಿ ನಷ್ಟಕ್ಕೊಳಗಾದ ರೈತರಿಗೆ ಎಕರೆಗೆ ಕನಿಷ್ಠ ಹತ್ತು ಸಾವಿರ ರೂ.ಗಳ ಪರಿಹಾರ ನೀಡಬೇಕು. ಇದಲ್ಲದೆ ಭತ್ತ ಕಟಾವು ಆರಂಭಗೊಳ್ಳುವ ಈ ಹೊತ್ತಲ್ಲೇ ರೈತರಿಗೆ ಚೇತರಿಕೆ ನೀಡಲು ಬೆಂಬಲ ಬೆಲೆ ಘೋಷಣೆ ಮಾಡಿ ಭತ್ತ ಖರೀದಿ ಅತಿ ಶೀಘ್ರದಲ್ಲಿ ಆರಂಭಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಜಿಲ್ಲಾ ಕೃಷಿಕ ಸಂಘ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದೆ.





