ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ಮಾದರಿ: ಪ್ರೀತಿ ಗೆಹ್ಲೋಟ್

ಉಡುಪಿ, ಅ.12: ಎಲ್ಲಾ ಇಲಾಖೆಗಳಲ್ಲಿ ಕಾರ್ಯದೊತ್ತಡ ಸಾಮಾನ್ಯವಾಗಿದ್ದು ವೇಗದ ಕಾರ್ಯಶೈಲಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳ ಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ವತಿಯಿಂದ ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡಿ ರುವ ಪ್ರೀತಿ ಗೆಹ್ಲೋಟ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಸ್ವಚ್ಚತೆ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರೀತಿ ಗೆಹ್ಲೋಟ್ ಅವರು ಸ್ಮರಣೀಯ ಕಾರ್ಯಗಳನ್ನು ಮಾಡಿದ್ದು, ಕೋವಿಡ್-19 ನಿರ್ವಹಣೆಯಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ನಿರ್ಗಮಿತ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್ ಮಾತನಾಡಿ, ಎಲ್ಲಾ ಯೋಜನೆ ಗಳು ಯಶಸ್ವಿಯಾಗಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಮಹತ್ವ ದಾಗಿದೆ. ಉಡುಪಿ ಜಿಲ್ಲೆಯು ಸಾಧನೆಗೆ ಪೂರಕವಾದ ವಾತಾವರಣವನ್ನು ಹೊಂದಿದ್ದು, ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ತಮಗೆ ಉತ್ತಮ ಸಹಕಾರ ಸಿಕ್ಕಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಎಲ್ಲಾ ಅಧಿಕಾರಿಗಳ ಸಹಕಾರದೊಂದಿಗೆ ಉಡುಪಿ ಯ ಯಶಸ್ಸಿನ ಮಾದರಿಯನ್ನು ಇನ್ನಷ್ಟು ಉತ್ತಮಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಜಿಲ್ಲಾ ಪಿಡಿಓ ಸಂಘ ಹಾಗೂ ಪಂಚಾಯತ್‌ರಾಜ್ ನೌಕರರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ನಿರ್ಗಮಿತ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಯವನ್ನು ಸನ್ಮಾನಿಸಿ ಬೀಳ್ಕೋಡಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಜಿಪಂ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಮುಖ್ಯ ಲೆಕ್ಕಾಧಿಕಾರಿ ಕೆ.ಜಿ.ಭಟ್, ಯೋಜನಾ ನಿರ್ದೇಶಕ ಗುರುದತ್, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಆರ್‌ಡಿಪಿಆರ್ ಸಂಘದ ಪದಾಧಿಕಾರಿ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸತೀಶ್ ಸ್ವಾಗತಿಸಿ ಪಿಡಿಓ ಮಹೇಶ್ ನಿರೂಪಿಸಿ ವಂದಿಸಿದರು.







