ದ.ಕ.: ಇನ್ನೆರೆಡು ದಿನ ಮಳೆ ಸುರಿಯುವ ಸಾಧ್ಯತೆ
ಮಂಗಳೂರು, ಅ.12: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ದ.ಕ. ಜಿಲ್ಲೆಯ ಹಲವು ಕಡೆ ಸೋಮವಾರ ಉತ್ತಮ ಮಳೆಯಾಗಿದೆ. ಮುಂದಿನ ಎರಡು ದಿನ ಕರಾವಳಿಗೆ ಆರೆಂಜ್ ಅಲರ್ಟ್ ಘೊಷಿಸಲಾಗಿದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ಘಟ್ಟ ಪ್ರದೇಶ ಸಹಿತ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಮಳೆ, ಗಾಳಿಯ ಅಬ್ಬರ ಬಿರುಸು ಪಡೆದಿತ್ತು. ಜಿಲ್ಲೆಯ ಬಹುತೇಕ ಕಡೆ ಮಧ್ಯಾಹ್ನವರೆಗೆ ಮೋಡ ಮುಸುಕಿದ ಬಿಸಿಲು ಮತ್ತು ತುಂತುರು ಮಳೆ ಸುರಿದಿತ್ತು. ಅಪರಾಹ್ನ 3ರ ಬಳಿಕ ಉತ್ತಮ ಮಳೆಯಾಗಿದೆ.
ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಹಲವೆಡೆ ನಾಲ್ಕೈದು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಳ್ಳ-ತೊರೆಗಳ ಸಹಿತ ನದಿ ಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಸೋಮವಾರ ಬೆಳಗ್ಗಿನಿಂದ ಸಂಜೆಯವರೆಗಿನ ಮಾಹಿತಿಯಂತೆ ಬೆಳ್ತಗಂಡಿ ತಾಲೂಕಿನ ನೆರಿಯಾದಲ್ಲಿ ಅತ್ಯಧಿಕ ಅಂದರೆ 44 ಮಿ.ಮೀ, ಮುಂಡಾಜೆಯಲ್ಲಿ 37 ಮಿ.ಮೀ ಮಳೆ ಸುರಿದಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 21.9 ಮಿ.ಮೀ. ಮಳೆಯಾಗಿದೆ. ಬಂಟ್ವಾಳ 20.8, ಬೆಳ್ತಂಗಡಿ 25.5, ಮಂಗಳೂರು 21.5, ಪುತ್ತೂರು 16.5, ಮತ್ತು ಸುಳ್ಯದಲ್ಲಿ 25 ಮಿ.ಮೀ. ಸುರಿದಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಬೆನ್ನಿಗೆ ಅರಬ್ಬಿ ಸಮುದ್ರದಲ್ಲೂ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕೊಂಕಣ ಮತ್ತು ದಕ್ಷಿಣ ಗುಜರಾತ್ ತೀರ ಪ್ರದೇಶಕ್ಕೆ ಹೊಂದಿಕೊಂಡಿರುವ ಪೂರ್ವ ಮಧ್ಯ ಹಾಗೂ ಈಶಾನ್ಯ ಅರಬ್ಬಿ ಸಮುದ್ರ ಭಾಗದಲ್ಲಿ ಅ.15ರಂದು ಕಡಿಮೆ ಒತ್ತಡ ಉಂಟಾಗಿ ವಾಯುಭಾರ ಕುಸಿತವಾಗಿ ಬದಲಾಗುವ ಸಾಧ್ಯತೆಯಿದೆ ಮುನ್ಸೂಚನೆ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ
ಸಮುದ್ರದಲ್ಲಿ ಗಂಟೆಗೆ 45-55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಕರ್ನಾಟಕ ಕರಾವಳಿಗೆ ಸಂಬಂಧಿಸಿದಂತೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಈಗಾಗಲೇ ಮೀನುಗಾರಿಕೆಗೆ ತೆರಗಳಿರುವ ದೋಣಿಗಳು ತಕ್ಷಣ ಬಂದರಿಗೆ ಹಿಂತಿರುಗುವಂತೆ ಹಮಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.







