ಅಲ್ಪಸಂಖ್ಯಾತರ ಕಲ್ಯಾಣದ ಅನುದಾನದಲ್ಲಿ ಕಡಿತ: ಮೊದಿನಬ್ಬ
ಉಡುಪಿ, ಅ.12: ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳಿಗೆ ನೀಡಲಾಗಿದ್ದ ಅನುದಾನದಲ್ಲಿ ಸುಮಾರು 450 ಕೋಟಿ ರೂ. ಹಣವನ್ನು ಕಡಿತಗೊಳಿಸುವ ರಾಜ್ಯ ಸರಕಾರದ ಕ್ರಮವು ಅಲ್ಪಸಂಖ್ಯಾತ ವಿರೋಧಿ ನೀತಿಯನ್ನು ಅನಾವರಣ ಗೊಳಿಸಿದೆ ಎಂದು ಶಂಸುಲ್ ಉಲಮಾ ಧಾರ್ಮಿಕ ಲೌಕಿಕ ಶಿಕ್ಷಣ ಅಕಾಡಮಿ ಪ್ರಧಾನ ಕಾರ್ಯದರ್ಶಿ ಎಂ. ಪಿ.ಮೊಯಿದಿನಬ್ಬ ಆರೋಪಿಸಿದ್ದಾರೆ.
ಸರಕಾರದ ಈ ತೀರ್ಮಾನವು ರಾಜ್ಯದ ಸಂಪತ್ತಿನ ಸಮಾನ ಹಂಚಿಕೆಯ ನಿಯಮಾವಳಿಗಳಿಗೆ ವಿರುದ್ಧವಾಗಿದೆಯಲ್ಲದೆ ಅಲ್ಪಸಂಖ್ಯಾತ ಸಮುದಾಯದ ಸಬಲೀಕರಣವನ್ನು ತಡೆಯುವ ಒಂದು ತಂತ್ರವಾಗಿದೆ. ಈಗಾಗಲೇ ರಾಜ್ಯದ ಬಿಜೆಪಿ ಸರಕಾರವು ಅಲ್ಪಸಂಖ್ಯಾತ ವಿದ್ಯಾರ್ಥಿ ಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಹಂತ ಹಂತವಾಗಿ ಕಡಿತಗೊಳಿಸುತ್ತ ಬರುತ್ತಿದೆ. ಸರಕಾರದ ಈ ಧೋರಣೆಯು ವಿದ್ಯಾರ್ಥಿ ಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ವನ್ನು ಕುಂಠಿತಗೊಳಿಸಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರಕಾರದ ಈ ರೀತಿಯ ನಿರ್ಧಾರದ ವಿರುದ್ಧ ಸಮುದಾಯದ ನಾಯಕರು, ಶಾಸಕರು, ಜಾತ್ಯಾತೀತ ರಾಜಕೀಯ ಪಕ್ಷಗಳ ನಾಯಕರು ಧ್ವನಿ ಎತ್ತಿ ಸರಕಾರ ದಿಂದ ನ್ಯಾಯಬದ್ಧವಾಗಿ ಸಿಗಬೇಕಾಗಿದ್ದ ಸವಲತ್ತುಗಳನ್ನು, ಹಕ್ಕುಗಳನ್ನು ಈ ಸಮುದಾಯಕ್ಕೆ ದೊರಕಿಸಿ ಕೊಡುವಲ್ಲಿ ಮುತು ವರ್ಜಿ ವಹಿಸಬೇಕಾಗಿದೆ ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.





