ಹತ್ರಸ್ ಪ್ರಕರಣ: ಕೇರಳ ಪತ್ರಕರ್ತನ ಬಂಧನ ಪ್ರಶ್ನಿಸಿದ್ದ ಅರ್ಜಿ 4 ವಾರದ ಬಳಿಕ ವಿಚಾರಣೆ; ಸುಪ್ರೀಂಕೋರ್ಟ್

ಹೊಸದಿಲ್ಲಿ, ಅ.12: ಉತ್ತರಪ್ರದೇಶದ ಹತ್ರಸ್‌ನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಬಳಿಕ ಮೃತಪಟ್ಟ ದಲಿತ ಮಹಿಳೆಯ ಮನೆಗೆ ಭೇಟಿ ನೀಡಲು ತೆರಳುತ್ತಿದ್ದ ಕೇರಳದ ಪತ್ರಕರ್ತನನ್ನು ಮಥುರಾದಲ್ಲಿ ಪೊಲೀಸರು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು 4 ವಾರಗಳ ಬಳಿಕ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಕೇರಳದ ಪತ್ರಕರ್ತ ಸಿದ್ದೀಕಿ ಕಪ್ಪನ್‌ರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದು ಅವರ ವಿರುದ್ಧ ಯುಎಪಿಎ (ಕಾನೂನುಬಾಹಿರ ಚಟುವಟಿಕೆ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹೀಗಿರುವಾಗ ಅವರಿಗೆ ಯಾವುದೇ ನ್ಯಾಯಾಲಯದಿಂದ ಜಾಮೀನು ಲಭಿಸದು ಮತ್ತು ಈ ಪ್ರಕರಣ ಹಲವು ವರ್ಷ ನಡೆಯುತ್ತದೆ. ಆದ್ದರಿಂದ ಅವರ ಸುರಕ್ಷಿತ ಬಿಡುಗಡೆಗೆ ಆಗ್ರಹಿಸಿ ತಾವು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದರು.
ಆದರೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕುಟುಂಬದ ಸದಸ್ಯರು ಮಾತ್ರ ಸಲ್ಲಿಸಬಹುದು ಎಂದ ಸುಪ್ರೀಂಕೋರ್ಟ್, ಸಹಾಯ ಬೇಕಿದ್ದರೆ ಅಲಹಾಬಾದ್ ಹೈಕೋರ್ಟನ್ನು ಸಂಪರ್ಕಿಸುವಂತೆ ಸಲಹೆ ನೀಡಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ತಿದ್ದುಪಡಿ ಅರ್ಜಿ ಸಲ್ಲಿಸಲು ಸಮಯಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು 4 ವಾರದ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.





