ನಾಪತ್ತೆಯಾಗಿದ್ದ ತಮಿಳುನಾಡು ವಿಜ್ಞಾನಿ ಆಂಧ್ರದಲ್ಲಿ ಪತ್ತೆ

ಬೆಂಗಳೂರು, ಅ.12: ಅಕ್ಟೋಬರ್ 6ರಿಂದ ನಾಪತ್ತೆಯಾಗಿದ್ದ ಮೈಸೂರಿನ ಬಾಬಾ ಅಣು ವಿಜ್ಞಾನ ಕೇಂದ್ರದ ವಿಜ್ಞಾನಿಯನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಮಿಳುನಾಡು ಮೂಲದ ಅಭಿಷೇಕ್ ರೆಡ್ಡಿ ಗುಲ್ಲ ಮೈಸೂರಿನ ಬಾಬಾ ಅಣು ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದು ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು. ಸೆಪ್ಟಂಬರ್ 17ರಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದ ಕಾರಣ ಅಕ್ಟೋಬರ್ 5ರಂದು ಅವರನ್ನು ಕಚೇರಿಯವರು ಸಂಪರ್ಕಿಸಿದಾಗ ಮರುದಿನದಿಂದ ಕೆಲಸಕ್ಕೆ ಹಾಜರಾಗುವುದಾಗಿ ತಿಳಿಸಿದ್ದರು.
ಆದರೆ ಅಕ್ಟೋಬರ್ 6ರಂದು ತನ್ನ ಮೊಬೈಲ್ ಫೋನ್, ಬ್ಯಾಗ್ ಮತ್ತಿತರ ವಸ್ತುಗಳನ್ನು ಕೋಣೆಯಲ್ಲಿಯೇ ಬಿಟ್ಟು ದ್ವಿಚಕ್ರ ವಾಹನವೇರಿ ಹೊರಗೆ ಹೊರಟವರು ನಾಪತ್ತೆಯಾಗಿದ್ದರು. ಈ ಬಗ್ಗೆ ಆತಂಕಗೊಂಡ ಸಂಸ್ಥೆಯ ಅಧಿಕಾರಿ ಟಿಕೆ ಬೋಸ್, ಅಭಿಷೇಕ್ ರೆಡ್ಡಿ ನಾಪತ್ತೆಯಾದ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಇದೀಗ ಅವರನ್ನು ಆಂಧ್ರದ ವಿಜಯವಾಡದಲ್ಲಿ ಪತ್ತೆಹಚ್ಚಲಾಗಿದ್ದು ಮೈಸೂರಿಗೆ ಹಿಂತಿರುಗುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







