ಮೀನುಗಾರಿಕೆ ಆದಾಯ ಮೂಲ : ಸಚಿವ ಕೋಟ
ಪಿಲಿಕುಳದಲ್ಲಿ ಮೀನು ಮರಿ ಬಿತ್ತನೆ

ಮಂಗಳೂರು, ಅ.12: ದ.ಕ.ಜಿಲ್ಲಾ ಮೀನುಗಾರಿಕೆ ಇಲಾಖೆ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಜಂಟಿ ಆಶ್ರಯದಲ್ಲಿ ಮೀನು ಕೃಷಿಕರ ದಿನಾಚರಣೆಯ ಅಂಗವಾಗಿ ರವಿವಾರ ಪಿಲಿಕುಳ ನಿಸರ್ಗದಾಮದಲ್ಲಿ ‘ಮೀನು ಮರಿ ಬಿತ್ತನೆ’ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಪಿಲಿಕುಳ ಸರೋವರದಲ್ಲಿ 20,0000 ಮೀನು ಮರಿಗಳ ಬಿಟ್ಟು ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶಾಲ ಕೆರೆಗಳಲ್ಲಿ ಇಂತಹ ಮೀನುಗಳ ಸಾಕಾಣಿಕೆ ಮಾಡುವುದರಿಂದ ಸಾಕಷ್ಟು ಆದಾಯ ಗಳಿಸಬಹುದು. ಇಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮೀನು ಸಾಕುವುದರೊಂದಿಗೆ ಪಿಲಿಕುಳ ನಿಸರ್ಗಧಾಮದ ಆದಾಯ ಹೆಚ್ಚಿಸಬೇಕು ಎಂದರು. ಅಲ್ಲದೆ ಮೀನು ಕೃಷಿಕರಿಗೆ ಮೀನು ಮರಿ ವಿತರಿಸಿದರು.
ಈ ಸಂದರ್ಭ ಮೀನುಗಾರಿಕಾ ಇಲಾಖೆ ಉಪ-ನಿರ್ದೇಶಕ ಪಾರ್ಶ್ವನಾಥ, ಡಾ. ಸುಶ್ಮಿತಾ, ದಿಲೀಪ್, ಕೆಎಫ್‌ಡಿಸಿ ಆಡಳಿತ ನಿರ್ದೇಶಕ ಎಂ ಎಲ್ ದೊಡ್ಮನಿ, ಪಿಲಿಕುಳ ಸಸ್ಯಶಾಸ್ತ್ರ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಸೂರ್ಯಪ್ರಕಾಶ್ ಶೆಣೈ, ಕಾರ್ಯದರ್ಶಿ ದಯಾಸಾಗರ್, ಡಾ. ನಿತಿನ್ ಎನ್‌ಕೆ, ಪಿಲಿಕುಳ ಮೀನು ಉದ್ಯಮಿ ‘ಜೆಮ್ಸ್ ಗೇಟ್ ಜ್ಯುವೆಲ್ಲರ್ಸ್’ ಮಾಲಕ ಡಾ. ಎಂಎಸ್ ನಝೀರ್, ನಾಗೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಪಿಲಿಕುಳ ಮೀನುಗಾರಿಕೆ
ಇಲ್ಲಿನ ಸರೋವರ ಮತ್ತು ಅಕ್ವೇರಿಯಂಗಳಲ್ಲಿ ಮೀನು ಮರಿ ಪೋಷಿಸಲಾಗುತ್ತದೆ. ಈ ಬಾರಿ ಇಲ್ಲಿಗೆ ಶಿವಮೊಗ್ಗದಿಂದ ಸಮಾರು 20,0000 ಮೀನು ಮರಿ ತಂದು ಬಿಡಲಾಗಿದೆ. ಹಿಂದಿನಂತೆ ಈ ಬಾರಿಯೂ ಪಿಲಿಕುಳ ಅಕ್ವೇರಿಯಂನಲ್ಲಿ 40 ದಿನಗಳವರೆಗೆ ಪೋಷಿಸಿಸಲಾದ ಕಾಮನ್ ಕಾರ್ಫ್ (ಗೌರಿಗೆಂಡೆ), ಕಾಟ್ಲ, ರೋಹೂ, ಮೃಗಾಲ್‌ನಂತಹ ದೊಡ್ಡ ಮೀನುಗಳ ಮರಿಗಳನ್ನು ಬಿಡಲಾಗಿದೆ. ಅಂತೆಯೇ ಪಿಲಿಕುಳ ಅಕ್ವೇರಿಯಂನಲ್ಲಿ 27 ಜಾತಿಯ ಆಲಂಕಾರಿಕ ಮೀನುಗಳಿದ್ದು, ಇವುಗಳಲ್ಲಿ ಕೆಲವು ಜಾತಿಯ ಮೀನುಗಳ ಮಾರಾಟ ಮಾಡಲಾಗುತ್ತದೆ ಎಂದು ಪಿಲಿಕುಳ ಅಕ್ವೇರಿಯಂ ನಿರ್ವಾಹಕ ನಾಗೇಶ್ ಕುಲಾಲ್ ಹೇಳಿದರು.







