ಧರ್ಮಗುರು ಸ್ಟ್ಯಾನ್ ಸ್ವಾಮಿಯ ಬಿಡುಗಡೆಗೆ ಆಗ್ರಹಿಸಿ ಧರಣಿ

ಮಂಗಳೂರು, ಅ.12: ಜಾರ್ಖಂಡ್‌ನ ರಾಂಚಿಯಲ್ಲಿ ಆದಿವಾಸಿಗಳ ಹಕ್ಕುಗಳ ಪರವಾಗಿ ಕೆಲಸ ಮಾಡುತ್ತಿರುವ ಮಾನವ ಹಕ್ಕು ಕಾರ್ಯಕರ್ತ ಜೆಸೂಯೆಟ್ ಸಭೆಯ ಧರ್ಮಗುರು ವಂ. ಸ್ಟ್ಯಾನ್ ಸ್ವಾಮಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ಪಡೆದು ಮುಂಬೈ ಜೈಲಿಗೆ ಕಳುಹಿಸಿರುವುದನ್ನು ಖಂಡಿಸಿ ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಸೋಮವಾರ ನಗರದ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿ ಧರಣಿ ನಡೆಯಿತು.
ಸಂತ ಅಲೋಶಿಯಸ್ ಕಾಲೇಜು, ಸ್ಪಂದನಾ ಟ್ರಸ್ಟ್ ಮತ್ತು ಸಿಟಿಝನ್ಸ್ ಫೋರಂ ಫೋರ್ ಮ್ಯಾಂಗಳೂರ್ ಡೆವಲಪ್‌ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಧರಣಿಯಲ್ಲಿ ಮಾನವ ಹಕ್ಕುಗಳು ಕಾರ್ಯಕರ್ತರಾದ ವಂ. ಸ್ಟಾನ್ ಸ್ವಾಮಿ ಕಳೆದ 15 ವರ್ಷಗಳಿಂದ ಆದಿವಾಸಿ ಮತ್ತು ಬಡವರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ನಕ್ಸಲ್ ಸಂಪರ್ಕ ಇದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅವರ ಸಹಿತ ವಶಕ್ಕೆ ಪಡೆದಿರುವ ಇತರ 15 ಮಂದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ಆಗ್ರಹ ಕೇಳಿ ಬಂತು.
ಈ ಸಂದರ್ಭ ಮುಂಬೈ ಹೈಕೋರ್ಟ್ ನ್ಯಾಯವಾದಿಗಳಾದ ಲಾರಾ ಜೆಸಾನಿ ಮತ್ತು ರಾಂಚಿಯ ಧರ್ಮ ಗುರು ವಂ.ಟೋನಿ ಪಿ.ಎಂ. ಅವರೊಂದಿಗೆ ಆನ್‌ಲೈನ್ ಝೂಮ್ ಕಾರ್ಯಕ್ರಮ ನಡೆಯಿತು. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ.ಮೆಲ್ವಿನ್ ಪಿಂಟೊ, ಕಾಲೇಜಿನ ಪ್ರಾಂಶುಪಾಲ ವಂ.ಡಾ. ಪ್ರವೀಣ್ ಮಾರ್ಟಿಸ್ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕ ನವೀನ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.













