ಪುತ್ತೂರು : ಹತ್ರಸ್ ಘಟನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಪುತ್ತೂರು: ಹತ್ರಸ್ ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣವು ದೇಶವೇ ತಲೆ ತಗ್ಗಿಸುವ ಪ್ರಕರಣವಾಗಿದ್ದು, ಹಂತಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಅವರನ್ನು ಗಲ್ಲಿಗೇರಿಸಬೇಕು. ಪ್ರಕರಣದ ಹೊಣೆ ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಒತ್ತಾಯಿಸಿದರು.
ಅವರು ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ, ದೌರ್ಜನ್ಯವನ್ನು ಖಂಡಿಸಿ ಪುತ್ತೂರು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಎಸ್‍ಸಿ ಘಟಕದ ವತಿಯಿಂದ ಸೋಮವಾರ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಬದುಕು ಕಷ್ಟವಾಗುತ್ತಿದೆ. ಇಂದು ಉತ್ತರ ಪ್ರದೇಶದಲ್ಲಿ ನಡೆದ ಘಟನೆ ನಾಳೆ ನಮ್ಮಲ್ಲಿಯೂ ನಡೆಯಬಹುದಾದ ಅಪಾಯವಿದೆ. ಈ ಕುರಿತು ಎಚ್ಚರಿಕೆಯ ಅಗತ್ಯವಿದೆ. ಹೆಣ್ಣು ಮಕ್ಕಳ ಬೆಲೆ ತಿಳಿಯುವುದು ಕುಟುಂಬ ಮೌಲ್ಯವನ್ನು ಅರಿತವರಿಗೆ ಮಾತ್ರ ಆದರೆ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಂತಹ ಮೌಲ್ಯಗಳ ಅರಿವಿಲ್ಲ. ಅವರಿಂದ ಹೆಣ್ಣು ಮಕ್ಕಳ ರಕ್ಷಣೆಯ ನಿರೀಕ್ಷೆ ಸಾಧ್ಯವಿಲ್ಲ ಎಂದರು.
ಕೆಪಿಸಿಸಿ ಸದಸ್ಯ ಎಂ.ಎಸ್. ಮಹಮ್ಮದ್, ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಿರಿಧರ ನಾಯ್ಕ್, ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ವಿಟ್ಲ-ಉಪ್ಪಿನಂಗಡಿ ಕಾಂಗ್ರೆಸ್ ಎಸ್‍ಸಿ ಘಟಕದ ಮುಖಂಡ ಸೇಸಪ್ಪ ನೆಕ್ಕಿಲು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಸದಸ್ಯ ಡಾ. ರಘು, ಜಿಪಂ ಸದಸ್ಯ ಶೇಖರ್ ಕುಕ್ಕೆಟ್ಟಿ, ದಲಿತ ಮುಖಂಡ ಐತ್ತಪ್ಪ ಪೇರಲ್ತಡ್ಕ, ಪುತ್ತೂರು ಬ್ಲಾಕ್ ಉಸ್ತುವಾರಿ ಗಣೇಶ್ ಪೂಜಾರಿ ಮತ್ತಿತರರು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಮಾಜಿ ಅಧ್ಯಕ್ಷ ಮೊಯ್ದೀನ್ ಅರ್ಶದ್ ದರ್ಬೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಅಧ್ಯಕ್ಷ ರಾಜು ಹೊಸ್ಮಠ, ಪುಡಾದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಡಾ. ರಾಜಾರಾಂ, ನ್ಯಾಯವಾದಿ ಭಾಸ್ಕರ ಗೌಡ ಇಚ್ಲಂಪಾಡಿ, ಚಂದ್ರಹಾಸ ರೈ ಬೋಳೋಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ರಾಮ ಪಾಂಬಾರು, ಕೃಷ್ಣಪ್ರಸಾದ್ ಆಳ್ವ, ಅಮಳ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.







