28 ದಿನಗಳ ಕಾಲ ಬದುಕಬಲ್ಲದು ಕೊರೋನ ವೈರಸ್: ಆಸ್ಟ್ರೇಲಿಯ ವಿಜ್ಞಾನಿಗಳ ಸಂಶೋಧನೆ

ಬ್ರಿಸ್ಬೇನ್ (ಆಸ್ಟ್ರೇಲಿಯ), ಅ. 12: ತಂಪು ಮತ್ತು ಕತ್ತಲಿನ ಪರಿಸ್ಥಿತಿಗಳಲ್ಲಿ, ಕರೆನ್ಸಿ ನೋಟ್‌ಗಳು ಮತ್ತು ಫೋನ್‌ಗಳು ಮುಂತಾದ ವಸ್ತುಗಳ ಮೇಲೆ ಕೊರೋನ ವೈರಸ್ 28 ದಿನಗಳ ಕಾಲ ಬದುಕಿರಬಲ್ಲದು ಎಂದು ಆಸ್ಟ್ರೇಲಿಯದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನವೊಂದು ತಿಳಿಸಿದೆ.
ಸಿಎಸ್‌ಐಆರ್‌ಒನ ಕಾಯಿಲೆ ಸಿದ್ಧತಾ ಕೇಂದ್ರದ ಸಂಶೋಧಕರು ಕತ್ತಲೆಯಲ್ಲಿ ಮೂರು ಉಷ್ಣತೆಗಳಲ್ಲಿ ಕೊರೋನ ವೈರಸ್‌ನ ಆಯುಷ್ಯದ ಬಗ್ಗೆ ಸಂಶೋಧನೆ ನಡೆಸಿದರು. ಪರಿಸರದ ಉಷ್ಣತೆ ಹೆಚ್ಚುತ್ತಿರುವಂತೆ, ವೈರಸ್ ಬದುಕುಳಿಯುವ ದರ ಕಡಿಮೆಯಾಗುತ್ತದೆ ಎನ್ನುವುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ ಎಂದು ಸಂಸ್ಥೆ ಸೋಮವಾರ ತಿಳಿಸಿದೆ.
20 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಮೊಬೈಲ್ ಫೋನ್ ಪರದೆ ಮುಂತಾದ ನಯವಾದ ಮೇಲ್ಮೈಗಳಲ್ಲಿ ಕೊರೋನ ವೈರಸ್ 28 ದಿನಗಳ ಕಾಲವೂ ಬದುಕಿರುತ್ತದೆ ಎನ್ನುವುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
30 ಡಿಗ್ರಿ ಉಷ್ಣತೆಯಲ್ಲಿ ವೈರಸ್ ಬದುಕುಳಿಯುವ ಪ್ರಮಾಣ 7 ದಿನಗಳಿಗೆ ಕುಸಿದಿದೆ ಹಾಗೂ 40 ಡಿಗ್ರಿ ಸೆಲ್ಸಿಯಸ್‌ನಲ್ಲಿ ಅದು 24 ಗಂಟೆಗಳ ಕಾಲ ಮಾತ್ರ ಬದುಕಿರುತ್ತದೆ ಎನ್ನುವುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.





