ಗ್ರಾ.ಪಂ. ಚುನಾವಣೆ ಮುಂದೂಡಿಕೆಗೆ ಸರಕಾರ ಪತ್ರ: ಚುನಾವಣಾ ಆಯೋಗಕ್ಕೆ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು, ಅ.12: ಜನರ ಆರೋಗ್ಯದ ಕಾರಣವೊಡ್ಡಿ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡುವಂತೆ ಕೋರಿ ರಾಜ್ಯ ಸರಕಾರ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದು, ಈ ಕುರಿತು ತನ್ನ ನಿಲುವು ಏನೆಂಬುದನ್ನು ತಿಳಿಸುವಂತೆ ಚುನಾವಣಾ ಆಯೋಗದ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ.
ರಾಜ್ಯದ ಗ್ರಾಮ ಪಂಚಾಯತ್ಗಳ ಅವಧಿ ಮುಗಿದ ಹಿನ್ನೆಲೆ ಕೂಡಲೇ ಚುನಾವಣೆ ನಡೆಸುವಂತೆ ಕೋರಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಚುನಾವಣಾ ಆಯೋಗದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಆಯೋಗ ಈಗಾಗಲೇ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚುನಾವಣೆಗಳನ್ನು ಸುರಕ್ಷಿತವಾಗಿ ನಡೆಸಲು ವಿಶೇಷ ಮಾರ್ಗಸೂಚಿಗಳನ್ನು ರೂಪಿಸಿದೆ. ಅಲ್ಲದೆ, ಚುನಾವಣಾ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ, ರಾಜ್ಯ ಸರಕಾರ ಇದೀಗ ಕೊರೋನ ಕಾರಣ ನೀಡಿ ಚುನಾವಣೆಗಳನ್ನು ಮುಂದೂಡುವಂತೆ ಕೋರಿ ಪತ್ರ ಬರೆದಿದೆ ಎಂದು ಪೀಠಕ್ಕೆ ತಿಳಿಸಿದರು. ಮುಚ್ಚಿದ ಲಕೋಟೆಯಲ್ಲಿ ಈಗಾಗಲೇ ಸಿದ್ಧಪಡಿಸಿರುವ ಚುನಾವಣಾ ದಿನಾಂಕಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವಾಗ ಕೊರೋನ ಕಾರಣ ನೀಡಿ ಚುನಾವಣೆ ನಡೆಸುವುದು ಬೇಡ ಎಂದರೆ ಹೇಗೆ ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಎಜಿ ಪ್ರಭುಲಿಂಗ ನಾವದಗಿ ಅವರು, ಸರಕಾರಕ್ಕೆ ಚುನಾವಣೆಗಳನ್ನು ಮುಂದೂಡುವುದು ಯಾವುದೇ ಉದ್ದೇಶವಿಲ್ಲ. ಬದಲಿಗೆ ರಾಜ್ಯದ ಜನರ ಆರೋಗ್ಯದ ಕಾರಣಕ್ಕಾಗಿ ಈ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು. ಅರ್ಜಿದಾರರ ಪರ ವಕೀಲರು ವಾದಿಸಿ, ರಾಜ್ಯ ಸರಕಾರ ಒಂದಿಲ್ಲೊಂದ ಕಾರಣಕ್ಕೆ ಚುನಾವಣೆ ಮುಂದೂಡಿಕೊಂಡು ಬರಲು ಪ್ರಯತ್ನಿಸುತ್ತಿದೆ. ಸರಕಾರಕ್ಕೆ ಜನಪ್ರತಿನಿಧಿಗಳ ಬದಲು ತಾನು ನೇಮಿಸಿರುವ ಆಡಳಿತಾಧಿಕಾರಿಗಳೇ ಪಂಚಾಯತ್ಗಳನ್ನು ನಡೆಸಲಿ ಎಂಬ ಉದ್ದೇಶವಿದೆ ಎಂದು ಆರೋಪಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಸುವ ಸಂಬಂಧ ತನ್ನ ನಿಲುವು ಸ್ಪಷ್ಟಪಡಿಸಿದರೆ ಮುಂದಿನದ್ದನ್ನು ನಿರ್ಧರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಆಯೋಗದ ಪರ ವಕೀಲರು ಪ್ರತಿಕ್ರಿಯಿಸಿ, ಈ ಸಂಬಂಧ ಆಯೋಗದ ನಿಲುವುನ್ನು ಮುಂದಿನ ವಿಚಾರಣೆ ವೇಳೆ ತಿಳಿಸುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ಆಯೋಗದ ನಿಲುವು ತಿಳಿಸುವಂತೆ ಸೂಚಿಸಿದ ಪೀಠ ವಿಚಾರಣೆಯನ್ನು ಅ.16ಕ್ಕೆ ಮುಂದೂಡಿತು.







