ಯುಎಇಯಲ್ಲಿನ ಭಾರತೀಯರಿಗೆ ವಿಮಾನ ಟಿಕೆಟ್ ಕಾಯ್ದಿರಿಸಲು ರಾಯಭಾರಿ ಕಚೇರಿ ನೋಂದಣಿ ಅಗತ್ಯವಿಲ್ಲ
ಏರ್ ಇಂಡಿಯಾ ಎಕ್ಸ್‌ಪ್ರೆಸ್

ಹೊಸದಿಲ್ಲಿ, ಅ.12: ಯುಎಇಯಲ್ಲಿರುವ ಭಾರತೀಯರು ಭಾರತಕ್ಕೆ ಪ್ರಯಾಣಿಸುವ ಸಂದರ್ಭ ಅಲ್ಲಿರುವ ಭಾರತೀಯ ದೂತಾವಾಸದಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.
ನೇರವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಬಹುದು ಎಂದು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಸೋಮವಾರ ಹೇಳಿದೆ. ಭಾರತ ಮತ್ತು ಯುಇಎಗಳು ‘ಏರ್‌ಬಬಲ್’ ಒಪ್ಪಂದದ ಭಾಗವಾಗಿರುವುದರಿಂದ, ಪ್ರಯಾಣಿಕರ ನೋಂದಾವಣೆಯ ಅಗತ್ಯವಿಲ್ಲ ಮತ್ತು ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ನೇರವಾಗಿ ಟಿಕೆಟ್ ಕಾಯ್ದಿರಿಸಬಹುದು ಎಂದು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆ ಟ್ವಿಟರ್‌ನಲ್ಲಿ ತಿಳಿಸಿದೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಅಕ್ಟೋಬರ್ 7ರವರೆಗೆ, ವಂದೇ ಭಾರತ್ ಯೋಜನೆಯಡಿ 17.2 ಲಕ್ಷ ಭಾರತೀಯರನ್ನು ವಿವಿಧ ರೀತಿಯಲ್ಲಿ ಸ್ವದೇಶಕ್ಕೆ ಕರೆತರಲಾಗಿದೆ. ನೌಕಾಸೇನೆಯ ಹಡಗುಗಳು, ಬಾಡಿಗೆ ವಿಮಾನ, ಏರ್‌ಇಂಡಿಯಾ, ಏರಿಂಡಿಯಾ ಎಕ್ಸ್‌ಪ್ರೆಸ್, ಖಾಸಗಿ ಮತ್ತು ವಿದೇಶಿ ವಿಮಾನಗಳ ಮೂಲಕ ವಿದೇಶದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ ಎಂದು ಕಳೆದ ವಾರ ವಿದೇಶ ವ್ಯವಹಾರ ಇಲಾಖೆ ತಿಳಿಸಿತ್ತು. ವಂದೇಭಾರತ್ ಯೋಜನೆಯ ಆರನೇ ಹಂತ ಅಕ್ಟೋಬರ್ 1ರಿಂದ ಆರಂಭವಾಗಿದ್ದು ಈ ಹಂತದಲ್ಲಿ 25 ದೇಶಗಳಿಂದ 873 ಅಂತರ್ ರಾಷ್ಟ್ರೀಯ ವಿಮಾನಗಳ ಸಂಚಾರದ ವೇಳಾಪಟ್ಟಿ ಸಿದ್ಧವಾಗಿದೆ. ಇದರಲ್ಲಿ 14 ದೇಶಗಳೊಂದಿಗೆ ಭಾರತ ದ್ವಿಪಕ್ಷೀಯ ‘ಏರ್ ಬಬಲ್’ ಒಪ್ಪಂದ ಮಾಡಿಕೊಂಡಿದೆ ಎಂದು ಇಲಾಖೆ ತಿಳಿಸಿದೆ.







