ಸಿಬಿಎಸ್ಇ ಕಂಪಾರ್ಟ್ಮೆಂಟ್ ಪರೀಕ್ಷೆ ಫಲಿತಾಂಶ ಪ್ರಕಟ: 56.55 ಶೇ. ವಿದ್ಯಾರ್ಥಿಗಳು ತೇರ್ಗಡೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಅ.12: ಸಿಬಿಎಸ್ಇಯ 10ನೇ ತರಗತಿ ಕಂಪಾರ್ಟ್ಮೆಂಟ್ ಪರೀಕ್ಷೆ(ವಿಭಾಗ ಪರೀಕ್ಷೆ)ಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು 56.55 ಶೇ. ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಸಿಬಿಎಸ್ಇ ಅಧಿಕಾರಿಗಳು ಹೇಳಿದ್ದಾರೆ.
ನೋಂದಾಯಿಸಿಕೊಂಡಿದ್ದ 1.57 ಲಕ್ಷ ವಿದ್ಯಾರ್ಥಿಗಳಲ್ಲಿ 1.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 82,903 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವಾರ ಸಿಬಿಎಸ್ಇ 12ನೇ ತರಗತಿಯ ಕಂಪಾರ್ಟ್ಮೆಂಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಮುಖ್ಯ ಪರೀಕ್ಷೆಯಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಒಂದು ವರ್ಷ ನಷ್ಟ ಮಾಡಿಕೊಳ್ಳದೆ, ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ‘ಕಂಪಾರ್ಟ್ಮೆಂಟ್ ಪರೀಕ್ಷೆ’ ಎಂದು ಕರೆಯಲಾಗುತ್ತದೆ. ಸಿಬಿಎಸ್ಇ 10 ಮತ್ತು 12ನೇ ತರಗತಿಯ ಕಂಪಾರ್ಟ್ಮೆಂಟ್ ಪರೀಕ್ಷೆ ಸೆಪ್ಟಂಬರ್ 22ರಿಂದ ದೇಶದಾದ್ಯಂತದ 1,268 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. ಅಲ್ಲದೆ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ರದ್ದಾಗಿರುವ ಪರೀಕ್ಷೆಗೆ ಸಂಬಂಧಿಸಿ ಪರ್ಯಾಯ ಮೌಲ್ಯಮಾಪನ ಯೋಜನೆಯಡಿ ಅಂಕ ನೀಡಲಾಗಿದ್ದು ಈ ಬಗ್ಗೆ ಅತೃಪ್ತಿ ಹೊಂದಿರುವ ವಿದ್ಯಾರ್ಥಿಗಳೂ ಕಂಪಾರ್ಟ್ಮೆಂಟ್ ಪರೀಕ್ಷೆ ಬರೆಯಬಹುದು ಎಂದು ಸರಕಾರ ತಿಳಿಸಿತ್ತು.





