ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಆರೋಪಿ ಜಾಮೀನು ಅರ್ಜಿ ವಿಚಾರಣೆ
ರಾಜ್ಯ ಸರಕಾರಕ್ಕೆ ಸುಪ್ರೀಂ ನೋಟೀಸ್ ಜಾರಿ
ಉಡುಪಿ, ಅ.12: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಿರಂಜನ್ ಭಟ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಅ.8ರಂದು ನೊಟೀಸ್ ಜಾರಿ ಮಾಡಿದೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿ ಎಸ್.ಎಸ್.ಬೋಪಣ್ಣ, ನ್ಯಾಯಮೂರ್ತಿ ವಿ.ರಾಮ ಸುಬ್ರಹ್ಮಣ್ಯಂ ಅವರನ್ನು ಒಳಗೊಂಡ ನ್ಯಾಯ ಪೀಠವು ಅರ್ಜಿ ಸಂಬಂಧ ಎರಡು ವಾರಗಳಲ್ಲಿ ಉತ್ತರ ನೀಡುವಂತೆ ರಾಜ್ಯ ಸರಕಾರಕ್ಕೆ ನೋಟೀಸ್ ಜಾರಿಗೊಳಿಸಿ ಆದೇಶ ನೀಡಿದೆ.
ನಿರಂಜನ್ ಭಟ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಜು.27ರಂದು ವಜಾಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಸ್ತು ಗಳನ್ನು ವಶಕ್ಕೆ ಪಡೆಯಬೇಕಾಗಿದ್ದು, ಹಲವು ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಇದಕ್ಕೆ ಆರು ತಿಂಗಳ ಕಾಲಾವಕಾಶ ಬೇಕಾಗಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಜಾಮೀನು ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ನಿರಂಜನ್ ಭಟ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.





