ಮರಳು ದಿಬ್ಬ ತೆರವು: ವರದಿ ನೀಡುವಂತೆ ಹಸಿರುಪೀಠ ನಿರ್ದೇಶನ
ಉಡುಪಿ, ಅ.12: ಸಿಆರ್‌ಝೆಡ್ ವ್ಯಾಪ್ತಿಯ ಮರಳು ದಿಬ್ಬಗಳನ್ನು ತೆರವು ಗೊಳಿಸುವ ವೇಳೆ ಉಡುಪಿ ಜಿಲ್ಲೆಯಲ್ಲಿ ನಿಯಮಗಳನ್ನು ಉಲ್ಲಂಘಿಸ ಲಾಗುತ್ತಿದೆ ಎಂಬ ದೂರು ಅರ್ಜಿಗೆ ಸಂಬಂಧಿಸಿ ವರದಿ ನೀಡುವಂತೆ ಚೆನ್ನೈಯಲ್ಲಿರುವ ಹಸಿರು ಪೀಠವು ಮರಳು ಉಸ್ತುವಾರಿ ಸಮತಿಯ ಅಧ್ಯಕ್ಷರಾಗಿರುವ ಉಡುಪಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
ಜಿಲ್ಲೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಮರಳುಗಾರಿಕೆ ನಡೆ ಯುತ್ತಿರುವ ಬಗ್ಗೆ ಉದಯ ಸುವರ್ಣ ಎಂಬವರು 2019ರಲ್ಲಿ ಹಸಿರು ಪೀಠಕ್ಕೆ ದೂರು ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಪೀಠವು ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರಿಗೆ ನಿರ್ದೇಶನ ನೀಡಿ, ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ವೇಳೆ ನಿಯಮ ಉಲ್ಲಂಘನೆಯಾಗಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಅ.6ಂದು ವರದಿ ನೀಡುವಂತೆ ತಿಳಿಸಿತ್ತು.
ಆದರೆ ಜಿಲ್ಲಾ ಸಮಿತಿಯು ನಿಗದಿತ ಸಮಯ ಮಿತಿಯೊಳಗೆ ವರದಿ ಸಲ್ಲಿಸದೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಪೀಠವು ವರದಿಯನ್ನು ನ.26ಕ್ಕೆ ಸಲ್ಲಿಸು ವಂತೆ ನಿರ್ದೇಶನ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯಲ್ಲಿ ಹಸಿರು ಪೀಠ ನಿಯಮದಡಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲಾಗುತ್ತಿದ್ದು, ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಹಸಿರು ಪೀಠ ಕೇಳಿರುವ ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.





