ನಿಮ್ಮ ಪುತ್ರಿಯನ್ನು ಇದೇ ರೀತಿ ಅಂತ್ಯಕ್ರಿಯೆ ನಡೆಸುತ್ತೀರಾ: ಉ.ಪ್ರ. ಎಡಿಜಿಗೆ ಹೈಕೋರ್ಟ್ ಪ್ರಶ್ನೆ
ಹತ್ರಸ್ ಪ್ರಕರಣ

ಲಕ್ನೋ: ಉತ್ತರಪ್ರದೇಶದ ಹತ್ರಸ್ ನಲ್ಲಿ ಮೇಲ್ಜಾತಿಯ ಯುವಕರಿಂದ ಅತ್ಯಾಚಾರಕ್ಕೀಡಾಗಿ, ಚಿತ್ರಹಿಂಸೆಯಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ 19ರ ಹರೆಯದ ದಲಿತ ಯುವತಿಯನ್ನು ರಾತ್ರೋರಾತ್ರಿ ಅಂತ್ಯಕ್ರಿಯೆ ನಡೆಸಿರುವ ಉತ್ತರಪ್ರದೇಶ ಪೊಲೀಸರ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪೀಠದಲ್ಲಿದ್ದ ನ್ಯಾಯಾಧೀಶರಾದ ಪಂಕಜ್ ಮಿತ್ತಲ್ ಹಾಗೂ ರಾಜನ್ ರಾಯ್, "ಒಂದು ವೇಳೆ ನಿಮ್ಮ ಮಗಳನ್ನು ಇದೇ ರೀತಿ ಅಂತ್ಯಕ್ರಿಯೆ ನಡೆಸಲು ನೀವು ಅವಕಾಶ ಕೊಡುತ್ತೀರಾ?ಎಂದು ಎಡಿಜಿ(ಕಾನೂನು ಹಾಗೂ ಸುವ್ಯವಸ್ಥೆ)ಪ್ರಶಾಂತ್ ಕುಮಾರ್ ಅವರನ್ನು ಕೇಳಿದರು. ಯುವತಿಯು ಶ್ರೀಮಂತ ಕುಟುಂಬದಿಂದ ಬಂದಿದ್ದರೆ ಪೊಲೀಸರ ಕ್ರಮ ಇದೇ ರೀತಿಯದ್ದಾಗಿರಬಹುದೇ? ಎಂದೂ ನ್ಯಾಯಾಲಯ ಪ್ರಶ್ನಿಸಿದೆ'' ಎಂದು ವಿಚಾರಣೆಯ ಬಳಿಕ ಸಂತ್ರಸ್ತ ಕುಟುಂಬದ ಪರ ವಕೀಲರು ಸುದ್ದಿಗಾರರಿಗೆ ತಿಳಿಸಿದರು.
ಹೈಕೋರ್ಟ್ ಪೀಠವು ಉತ್ತರಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಹತ್ರಸ್ ಡಿಎಂ ಹಾಗೂ ಎಸ್ಪಿ ಹಾಗೂ ಎಡಿಜಿಗೆ ಸಮನ್ಸ್ ನೀಡಿತು. ಸಂತ್ರಸ್ತೆಯ ಕುಟುಂಬದವರು ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.
ಪ್ರಕರಣವನ್ನು ರಾಜ್ಯದಿಂದ ಹೊರಗಡೆ ವರ್ಗಾಯಿಸಬೇಕು. ನಮಗೆ ಸ್ಥಳೀಯಾಡಳಿತದ ಮೇಲೆ ನಂಬಿಕೆ ಇಲ್ಲ. ನ್ಯಾಯಾಂಗ ಪ್ರಕ್ರಿಯೆ ಮುಗಿಯುವ ತನಕವೂ ನಮಗೆ ಭದ್ರತೆಯನ್ನು ಒದಗಿಸಬೇಕೆಂದು ಸಂತ್ರಸ್ತೆಯ ಕುಟುಂಬದವರು ನ್ಯಾಯಾಲಯವನ್ನು ಕೋರಿದರು.
ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ನ್ಯಾಯಾಲಯದಲ್ಲಿ ಹಾಜರಿದ್ದರು. ಯುವತಿಯ ಶವವನ್ನು ರಾತ್ರಿ ವೇಳೆ ದಹನ ಮಾಡಲು ನಾನೇ ಆದೇಶಿಸಿದ್ದೆ ಎಂದು ಒಪ್ಪಿಕೊಂಡರು. ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿದೆ.







