ಎಫ್‌ಎಟಿಎಫ್‌ನ ತೀವ್ರ ನಿಗಾ ಪಟ್ಟಿಯಲ್ಲೇ ಪಾಕ್ ಮುಂದುವರಿಕೆ
ಇಸ್ಲಾಮಾಬಾದ್, ಅ. 12: ಪಾಕಿಸ್ತಾನವನ್ನು ‘ಭಯೋತ್ಪಾದನೆ ನಿಗಾ’ ಪಟ್ಟಿಯಿಂದ ಹೊರಗಿಡಲು, ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣದ ಹರಿವನ್ನು ನಿಲ್ಲಿಸಲು ಅದು ತೆಗೆದುಕೊಂಡಿರುವ ಕ್ರಮಗಳು ಸಾಕಾಗುವುದಿಲ್ಲ ಎಂದು ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ಗೆ ಒಳಪಟ್ಟ ಪ್ರಾದೇಶಿಕ ಸಂಸ್ಥೆ ಏಶ್ಯ ಪೆಸಿಫಿಕ್ ಗ್ರೂಪ್ (ಎಪಿಜಿ) ಹೇಳಿದೆ ಹಾಗೂ ದೇಶವನ್ನು ‘ಭಯೋತ್ಪಾದನೆಯ ಹೆಚ್ಚುವರಿ ನಿಗಾ ಪಟ್ಟಿಯಲ್ಲೇ’ ಮುಂದುವರಿಸಲು ಸೋಮವಾರ ನಿರ್ಧರಿಸಿದೆ ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ.
ಭಯೋತ್ಪಾದನೆಗೆ ಪೂರೈಕೆಯಾಗುತ್ತಿರುವ ಹಣದ ಮೇಲೆ ನಿಗಾ ಇಡುವ ಎಫ್‌ಎಟಿಎಫ್‌ನ ಸಭೆ ನಡೆಯಲು ಕೆಲವೇ ವಾರಗಳು ಬಾಕಿಯಿರುವಾಗ ಈ ಬೆಳವಣಿಗೆ ಸಂಭವಿಸಿದೆ. ಆ ಸಭೆಯಲ್ಲಿ, ಪಾಕಿಸ್ತಾನ ಈಗ ಇರುವ ‘ಬೂದಿ ಪಟ್ಟಿ’ (ತೀವ್ರ ನಿಗಾ)ಯ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುತ್ತದೆ.
40 ವಿಷಯಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆ ಎಫ್‌ಎಟಿಎಫ್ ಈ ಹಿಂದೆ ಪಾಕಿಸ್ತಾನಕ್ಕೆ ಸೂಚಿಸಿತ್ತು. ಈ ವಿಷಯದಲ್ಲಿ ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮಗಳನ್ನು ಏಶ್ಯ ಪೆಸಿಫಿಕ್ ಗ್ರೂಪ್ ವಿಶ್ಲೇಷಿಸಿದೆ. ಪಾಕಿಸ್ತಾನವು ನಾಲ್ಕು ವಿಷಯಗಳಲ್ಲಿ ಕ್ರಮವನ್ನೇ ತೆಗೆದುಕೊಂಡಿಲ್ಲ, 25 ವಿಷಯಗಳಲ್ಲಿ ಆಂಶಿಕ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು 9 ವಿಷಯಗಳಲ್ಲಿ ಬಹುತೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಎಪಿಜಿ ತನ್ನ ವಿಶ್ಲೇಷಣಾ ವರದಿಯಲ್ಲಿ ತಿಳಿಸಿದೆ.





