ಆರ್ಕ್‌ಟಿಕ್‌ನಲ್ಲಿ ಹಿಮಮುಕ್ತ ಬೇಸಿಗೆ: ಜಾಗತಿಕ ತಾಪಮಾನದ ಪರಿಣಾಮ
ವಿಜ್ಞಾನಿಗಳ ತಂಡ ಎಚ್ಚರಿಕೆ
ಬರ್ಲಿನ್ (ಜರ್ಮನಿ), ಅ. 12: ಆರ್ಕ್‌ಟಿಕ್ ಸಮುದ್ರವು ಸಾಯುವ ಹಂತದಲ್ಲಿದೆ ಹಾಗೂ ಕೆಲವೇ ದಶಕಗಳಲ್ಲಿ ಬೇಸಿಗೆ ಕಾಲಗಳು ಹಿಮಮುಕ್ತವಾಗಲಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಉತ್ರರ ಧ್ರುವದ ಸಂಶೋಧನೆಗಾಗಿ ತೆರಳಿದ್ದ ಜಗತ್ತಿನ ಅತಿ ದೊಡ್ಡ ಸಂಶೋಧನಾ ತಂಡವು ತನ್ನ ಸಂಶೋಧನೆಯನ್ನು ಮುಕ್ತಾಯಗೊಳಿಸಿದ್ದು, ಸೋಮವಾರ ಕರಾಳ ಪುರಾವೆಗಳೊಂದಿಗೆ ಹಿಂದಿರುಗಿದೆ. ಆರ್ಕ್‌ಟಿಕ್‌ನಲ್ಲಿ 389 ದಿನಗಳನ್ನು ಕಳೆದ ಬಳಿಕ ವಿಜ್ಞಾನಿಗಳನ್ನು ಹೊತ್ತ ಜರ್ಮನ್ ಆಲ್‌ಫ್ರೆಡ್ ವೆಗನರ್ ಇನ್‌ಸ್ಟಿಟ್ಯೂಟ್‌ನ ‘ಪೋಲಾರ್‌ಸ್ಟರ್ನ್’ ಹಡಗು ಬ್ರೆಮರ್‌ಹ್ಯಾವನ್ ಬಂದರಿಗೆ ಹಿಂದಿರುಗಲಿದೆ.
ತಂಡದಲ್ಲಿ 20 ದೇಶಗಳ ನೂರಾರು ವಿಜ್ಞಾನಿಗಳಿದ್ದಾರೆ. ಆರ್ಕ್‌ಟಿಕ್ ವಲಯದ ಹಿಮ ರಾಶಿಯ ಮೇಲೆ ಜಾಗತಿಕ ತಾಪಮಾನದ ಪರಿಣಾಮಗಳನ್ನು ಅವರು ಕಣ್ಣಾರೆ ಕಂಡಿದ್ದಾರೆ.
‘‘ಆರ್ಕ್‌ಟಿಕ್ ಸಮುದ್ರವು ಹೇಗೆ ಸಾಯುತ್ತಿದೆ ಎನ್ನುವುದನ್ನು ನಾವು ಕಂಡಿದ್ದೇವೆ’’ ಎಂದು ತಂಡದ ನಾಯಕ ಮಾರ್ಕಸ್ ರೆಕ್ಸ್ ಹೇಳಿದ್ದಾರೆ.
‘‘ಉತ್ತರ ಧ್ರುವದಲ್ಲಿ ಜಾಗತಿಕ ತಾಪಮಾನವು ನಿರಾತಂಕವಾಗಿ ಮುಂದುವರಿದರೆ, ಕೆಲವೇ ದಶಕಗಳಲ್ಲಿ ನಾವು ಬೇಸಿಗೆಯಲ್ಲಿ ಹಿಮಮುಕ್ತ ಆರ್ಕ್‌ಟಿಕನ್ನು ನೋಡಲಿದ್ದೇವೆ’’ ಎಂದು ಅವರು ಎಚ್ಚರಿಸಿದರು.







