ಈ ಜಿಲ್ಲೆಗೆ 16 ವರ್ಷದ ಬಾಲಕಿ ಜಿಲ್ಲಾಧಿಕಾರಿ!

ಅನಂತಪುರಂ(ಆಂಧ್ರ ಪ್ರದೇಶ): ಹದಿನಾರು ವರ್ಷದ ಬಾಲಕಿ ಶ್ರಾವಣಿ ಒಂದು ದಿನದ ಮಟ್ಟಿಗೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ವಿಶಿಷ್ಟ ಅನುಭವ ತನ್ನದಾಗಿಸಿಕೊಂಡರು.
ಶ್ರಾವಣಿ ಮೊದಲಿಗೆ ಸಂತ್ರಸ್ತ ಬಾಲಕಿಗೆ ಎಸ್/ಎಸ್ ಟಿ ದೌರ್ಜನ್ಯ ಕಾಯ್ದೆ ಅಡಿ 25 ಸಾವಿರ ರೂ. ಮಂಜೂರು ಮಾಡುವ ಸವಾಲನ್ನು ಪೂರೈಸಿದರು. ಮಹಿಳಾ ಅಧಿಕಾರಿಗಳು ರಾತ್ರಿ 8ರಿಂದ ಬೆಳಗ್ಗೆ 8ರ ತನಕ ಅಧಿಕಾರಿಗಳ ಕರೆಗಳನ್ನು ಸ್ವೀಕರಿಸುವುದರಿಂದ ವಿನಾಯಿತಿ ನೀಡುವ ಆದೇಶಕ್ಕೆ ಸಹಿ ಹಾಕಿದರು.
ನಗರ ಪ್ರದಕ್ಷಿಣೆಗೆ ಹೊರಟ ಶ್ರಾವಣಿ ನೀರು ನಿಂತು ಹದಗೆಟ್ಟಿದ್ದ ರಸ್ತೆಗಳನ್ನು ತಕ್ಷಣವೇ ದುರಸ್ತಿ ಮಾಡುವಂತೆ ಆದೇಶಿಸಿದರು. ಮುನ್ಸಿಪಲ್ ಗರ್ಲ್ ಹೈ ಸ್ಕೂಲ್ ನಲ್ಲಿ ಜಗನನ್ನಾ ವಿದ್ಯಾಕನುಕಾ ಉಚಿತ ಶಾಲಾ ಕಿಟ್ಸ್ ವಿತರಣೆಯನ್ನು ಪರಿಶೀಲಿಸಿದರು.
ಬೆಂಗಳೂರಿಗೆ ಹತ್ತಿರವಾಗಿರುವ ರಾಯಲಸೀಮಾ ಜಿಲ್ಲೆಯಲ್ಲಿ ಒಂದಿಡೀ ದಿನ ಶಾಲಾ ಬಾಲಕಿಯು ಎಲ್ಲ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿಭಾಯಿಸಿದರು.
ಜಿಲ್ಲಾಧಿಕಾರಿ ಗಂಧಮ್ ಚಂದ್ರುಡು ಅವರ ಅತ್ಯಂತ ಹಿಂದುಳಿದ ಹೆಣ್ಣು ಮಕ್ಕಳನ್ನು ಉತ್ತೇಜಿಸುವ,ಶಿಕ್ಷಣ ಹಾಗೂ ವೃತ್ತಿಜೀವನದಲ್ಲಿ ಆತ್ಮವಿಶ್ವಾಸ ಗಳಿಸುವ ಭಾಗವಾಗಿ 'ಹೆಣ್ಣು ಮಗುವೇ ನಮ್ಮ ಭವಿಷ್ಯ' ಎಂಬ ಕಲ್ಪನೆಯಡಿಯಲ್ಲಿ ಶ್ರಾವಣಿ ಒಂದು ದಿನ ಜಿಲ್ಲಾಧಿಕಾರಿಯಾಗುವ ಅಪೂರ್ವ ಅವಕಾಶ ಪಡೆದರು.
ವಿವಿಧ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಾಲಕಿಯರ ಅಂತಿಮ ಪಟ್ಟಿಯನ್ನು ತಯಾರಿಸಲಾಗಿದ್ದು, ಬಳಿಕ ನಿರ್ದಿಷ್ಟ ಪಾತ್ರಗಳಿಗಾಗಿ ಆಯ್ಕೆ ಮಾಡಲಾಗಿದೆ. ಶ್ರಾವಣಿ ಕಸ್ತೂರ್ಬ ಗಾಂಧಿ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದಾಳೆ.
25 ವರ್ಷಗಳ ಹಿಂದೆ ನೆರೆಯ ಕರ್ನೂಲ್ ಜಿಲ್ಲೆಯಲ್ಲಿ ತನ್ನ ಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದ ನನ್ನ ಜೀವನದ ಒಂದು ಸ್ಮರಣೀಯ ದಿನ ನೆನಪಿಗೆ ಬಂತು. ಅದು ನನ್ನ ಮೇಲೆ ಭಾರೀ ಪ್ರಭಾವ ಬೀರಿತ್ತು. ಇಂತಹ ಅನುಭವಗಳು ನನ್ನಂತೆಯೇ ಬಡ ಕುಟುಂಬದಿಂದ ಬಂದಿರುವ ಮಕ್ಕಳಿಗೆ ದೊಡ್ಡ ಗುರಿ ಸಾಧಿಸಲು ನೆರವಾಗುತ್ತದೆ ಎಂದು ಜಿಲ್ಲಾಧಿಕಾರಿ ಚಂದ್ರುಡು ತಿಳಿಸಿದರು.







